;
top of page
< Back

ಸಪ್ತರ್ಷಿಗಳ ನೆಲೆಯಲ್ಲಿ ಅರಳಿದ KLE

ಸಪ್ತರ್ಷಿಗಳ ನೆಲೆಯಲ್ಲಿ ಅರಳಿದ KLE

Kore honour

ಬೆಳಗಾವಿ: ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಿಗೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರನ್ನು ಗಣ್ಯರ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಕೋರೆ, ಕೆಎಲ್‌ಇ ಸಂಸ್ಥೆಯ 110 ವರ್ಷಗಳ ಸುದೀರ್ಘ ಪಯಣವನ್ನು ಸ್ಮರಿಸಿದರು. ಸಂಸ್ಥೆ ಆರಂಭವಾದಾಗ ಹಣ, ಸ್ವಂತ ಕಟ್ಟಡ ಅಥವಾ ಅಗತ್ಯ ಸೌಲಭ್ಯಗಳಿರಲಿಲ್ಲ. ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸಂಸ್ಥಾಪಕ ‘ಸಪ್ತರ್ಷಿ’ಗಳ ಅಚಲ ಸಂಕಲ್ಪವೇ ಸಂಸ್ಥೆಯ ದೊಡ್ಡ ಆಸ್ತಿಯಾಗಿತ್ತು ಎಂದು ಹೇಳಿದರು.
ಸಪ್ತರ್ಷಿಗಳ ತ್ಯಾಗ, ಪರಿಶ್ರಮ ಮತ್ತು ದೂರದೃಷ್ಟಿಯ ಫಲವಾಗಿ ಇಂದು ಕೆಎಲ್‌ಇ ಸಂಸ್ಥೆ ನೂರಾರು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಸಂಶೋಧನಾ ಕೇಂದ್ರಗಳನ್ನು ಹೊಂದುವ ಮಟ್ಟಕ್ಕೆ ಬೆಳೆದಿದೆ. ಈ ಸಾಧನೆ ನನ್ನೊಬ್ಬನದ್ದಲ್ಲ; ಸಂಸ್ಥಾಪಕರು, ಆಡಳಿತ ಮಂಡಳಿ, ಶಿಕ್ಷಕರು, ವೈದ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದ ಫಲವಾಗಿದೆ ಎಂದು ಕೋರೆ ತಿಳಿಸಿದರು.
ಶಿಕ್ಷಣವು ಸಮಾಜ ಪರಿವರ್ತನೆಯ ಪ್ರಮುಖ ಸಾಧನವಾಗಿದ್ದು, ಗುಣಮಟ್ಟದ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ದೊರೆಯಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ರೋಗಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವುದೇ ಸಂಸ್ಥೆಯ ಧ್ಯೇಯವಾಗಿದೆ ಎಂದರು.
ಅವಿನಾಶ ಪೊತದಾರ, ಶಿರೀಷ ಗೋಗಟೆ ಸೇರಿದಂತೆ ಗಣ್ಯರು ಮಾತನಾಡಿ, ಡಾ. ಕೋರೆ ಅವರ ನಾಯಕತ್ವ, ಶಿಸ್ತು, ದೂರದೃಷ್ಟಿ ಮತ್ತು ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದರು. “ಹೂವಿನ ಸುಗಂಧ ಗಾಳಿ ಬೀಸಿದ ದಿಕ್ಕಿಗೆ ಮಾತ್ರ ಹರಡುತ್ತದೆ. ಆದರೆ ಒಳ್ಳೆಯ ವ್ಯಕ್ತಿಯ ಸಾಧನೆಯ ಸುಗಂಧ ಎಲ್ಲ ದಿಕ್ಕುಗಳಿಗೂ ಹರಡುತ್ತದೆ. ಅದಕ್ಕೆ ಡಾ. ಕೋರೆ ಉತ್ತಮ ಉದಾಹರಣೆ” ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

bottom of page