ಶ್.ಶ್...ಸರ್ಕಾರ ಮಲಗಿದೆ...
ಶ್.ಶ್...ಸರ್ಕಾರ ಮಲಗಿದೆ...

ಶ್... ಗಡಿ ಕುದಿಯುತ್ತಿದೆ, ಸರ್ಕಾರ ನಿದ್ರೆಯಲ್ಲಿದೆ!
ಎಂಇಎಸ್‌ಗೆ ಮಹಾರಾಷ್ಟ್ರದ ಮಣೆ;
ಕನ್ನಡಿಗರಿಗೆ ಕರ್ನಾಟಕದ ಮೌನ.
(Ebelagavi Special Report)
ಬೆಳಗಾವಿ ಗಡಿ ವಿವಾದ ಹಾಗೂ ಮರಾಠಿ ಭಾಷಿಕರ ಸಮಸ್ಯೆ ಆಲಿಸಲು ಮಹಾರಾಷ್ಟ್ರ ಸರ್ಕಾರ ಜೂನ್ 30ರಂದು ವಿಧಾನಸಭೆಯಲ್ಲಿ ಸಭೆ ಕರೆದಿದ್ದು, ಬೆಳಗಾವಿಯ ಎಂಇಎಸ್ ಮುಖಂಡರಿಗೂ ಆಹ್ವಾನ ನೀಡಿದೆ. ಗಡಿಯಾಚೆ ಸರ್ಕಾರ ಬೆಳಗಾವಿ ವಿಷಯದಲ್ಲಿ ಚುರುಕಾಗಿದ್ದರೆ, ಕರ್ನಾಟಕ ಸರ್ಕಾರ ಮಾತ್ರ ಗಾಢ ನಿದ್ರೆಯಲ್ಲಿದೆ!
ಮಹಾರಾಷ್ಟ್ರ ತನ್ನ ಭಾಷಿಕರ ಅಹವಾಲು ಕೇಳಲು ಸಭೆ ನಡೆಸುತ್ತಿದೆ. ಆದರೆ ಗಡಿಭಾಗದ ಕನ್ನಡಿಗರ ಭಾವನೆ, ಆತಂಕ ಮತ್ತು ಸ್ವಾಭಿಮಾನಕ್ಕೆ ಸ್ಪಂದಿಸಲು ಕರ್ನಾಟಕ ಸರ್ಕಾರಕ್ಕೆ ಸಮಯವೇ ಇಲ್ಲದಂತಾಗಿದೆ. ‘ನಾಡು–ನುಡಿ ರಕ್ಷಣೆಗೆ ನಾವಿದ್ದೇವೆ’ ಎಂಬ ಒಂದೇ ಒಂದು ಗಟ್ಟಿ ಮಾತನ್ನೂ ಸರ್ಕಾರ ಆಡಿಲ್ಲ.
ಹಿಂದೆ ಎಚ್.ಕೆ. ಪಾಟೀಲ ಅವರಿಗೆ ಗಡಿ ಉಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಈಗ ಗಡಿಗೆ ಉಸ್ತುವಾರಿ ಯಾರು? ಮಹಾರಾಷ್ಟ್ರದ ನಡೆಗೆ ಉತ್ತರಿಸುವವರು ಯಾರು? ಕನ್ನಡಿಗರ ಪರ ಧ್ವನಿ ಎತ್ತುವವರು ಯಾರು? ಸರ್ಕಾರದ ಬಳಿ ಉತ್ತರವಿಲ್ಲ.
ಇನ್ನೊಂದೆಡೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಠರಾವು ಅಂಗೀಕರಿಸುವ ವಿಚಾರವೂ ಪತ್ರಗಳ ಪರೇಡ್‌ನಲ್ಲಿ ಸಿಲುಕಿದೆ. ಮುಖ್ಯ ಕಾರ್ಯದರ್ಶಿಯಿಂದ ನಗರಾಭಿವೃದ್ಧಿ ಇಲಾಖೆ, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ, ಮತ್ತೆ ಪಾಲಿಕೆಗೆ ವಿವರಣೆ ಕೇಳುವ ಪತ್ರ—ಆದರೆ ಠರಾವು ಮಾತ್ರ ಇಲ್ಲ!
ಇದು ಆಡಳಿತಾತ್ಮಕ ಪ್ರಕ್ರಿಯೆಯೋ ಅಥವಾ ಕನ್ನಡಿಗರ ಭಾವನೆಯೊಂದಿಗೆ ಚೆಲ್ಲಾಟವೋ?
ಮಹಾರಾಷ್ಟ್ರ ಸಭೆ ನಡೆಸುತ್ತಿದೆ. ಎಂಇಎಸ್ ಸಜ್ಜಾಗಿದೆ. ಕರ್ನಾಟಕ ಮಾತ್ರ ಕಡತ ತಳ್ಳುತ್ತಿದೆ. ಸರ್ಕಾರದ ಮೌನವೇ ಎಂಇಎಸ್‌ಗೆ ಆಮ್ಲಜನಕವಾಗುತ್ತಿದೆ.
ಇನ್ನಾದರೂ ಸರ್ಕಾರ ಎಚ್ಚೆತ್ತು, ಗಡಿ ಉಸ್ತುವಾರಿ ನೇಮಿಸಿ, ಕನ್ನಡ ಸಂಘಟನೆಗಳ ಸಭೆ ಕರೆದು, ಪಾಲಿಕೆಯಲ್ಲಿ ಠರಾವು ಅಂಗೀಕಾರಕ್ಕೆ ಸ್ಪಷ್ಟ ಆದೇಶ ನೀಡಲಿ.
ಶಬ್ದ ಮಾಡಬೇಡಿ... ಸರ್ಕಾರ ಇನ್ನೂ ನಿದ್ರೆಯಲ್ಲಿದೆ!
