;
top of page
< Back

ಶಿವಂ ಅಸೋಸಿಯೇಟ್‌ ಮೇಲೆ ಕೆಪಿಐಡಿ ಕಾಯ್ದೆಯಡಿ ತನಿಖೆಗೆ ಡಿಸಿ ಆದೇಶ

ಶಿವಂ ಅಸೋಸಿಯೇಟ್‌ ಮೇಲೆ ಕೆಪಿಐಡಿ ಕಾಯ್ದೆಯಡಿ ತನಿಖೆಗೆ ಡಿಸಿ ಆದೇಶ

Public issue

,
ಠೇವಣಿದಾರರ ಹಿತ ರಕ್ಷಣೆಗಾಗಿ ತುರ್ತು ಕ್ರಮ; 24 ಗಂಟೆಯಲ್ಲಿ ವರದಿ ಸಲ್ಲಿಸಲು ಎಸಿಗೆ ಸೂಚನೆ
ಬೆಳಗಾವಿ:
ಸಾರ್ವಜನಿಕರಿಂದ ಹೆಚ್ಚಿನ ಲಾಭದ ಭರವಸೆ ನೀಡಿ ಠೇವಣಿ ಸಂಗ್ರಹಿಸುತ್ತಿರುವ ಆರೋಪಕ್ಕೆ ಗುರಿಯಾಗಿರುವ ಶಿವಂ ಅಸೋಸಿಯೇಟ್‌ ಸಂಸ್ಥೆ ವಿರುದ್ಧ ಬೆಳಗಾವಿ ಜಿಲ್ಲಾಡಳಿತ ಗಂಭೀರ ಕ್ರಮಕ್ಕೆ ಮುಂದಾಗಿದೆ. ಕರ್ನಾಟಕ ಠೇವಣಿದಾರರ ಹಿತಾಸಕ್ತಿ ರಕ್ಷಣಾ ಕಾಯ್ದೆ–2004ರಡಿ ಸಂಸ್ಥೆಯ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ.
ಮಾರುಕಟ್ಟೆ ಗುಪ್ತಚರ ಮಾಹಿತಿಗಳು, ಸಂಸ್ಥೆಯ ಜಾಹೀರಾತು–ಪ್ರಚಾರ ಸಾಮಗ್ರಿಗಳು ಹಾಗೂ ಬೆಳಗಾವಿ ಪೊಲೀಸ್ ಆಯುಕ್ತರು ಮೇ 13ರಂದು ಸಲ್ಲಿಸಿದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಶಿವಬಸವನಗರದಲ್ಲಿ ಕಚೇರಿ ಹೊಂದಿರುವ ಶಿವಂ ಅಸೋಸಿಯೇಟ್‌ ಸಂಸ್ಥೆ ಸಾರ್ವಜನಿಕರಿಂದ ವಿವಿಧ ಯೋಜನೆಗಳಡಿ ಠೇವಣಿ ಸಂಗ್ರಹಿಸಿ, ಅಸಾಮಾನ್ಯ ಹಾಗೂ ಹೆಚ್ಚಿನ ಆದಾಯದ ಭರವಸೆ ನೀಡಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಲ್ಲಿ, ಬೆಳಗಾವಿ ಉಪವಿಭಾಗಾಧಿಕಾರಿಗಳಿಗೆ ಸಂಸ್ಥೆಯ ಠೇವಣಿ ಸಂಗ್ರಹ ಯೋಜನೆಗಳು, ಜಾಹೀರಾತುಗಳು, ಹಣಕಾಸು ವ್ಯವಹಾರಗಳು, ಚರ–ಅಚರ ಆಸ್ತಿಗಳು, ಬ್ಯಾಂಕ್ ಖಾತೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಶೋಧ, ಪರಿಶೀಲನೆ, ದಾಖಲೆ ವಶಪಡಿಸಿಕೊಳ್ಳುವುದು, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು ಹಾಗೂ ಆಸ್ತಿ ಜಪ್ತಿ ಪ್ರಕ್ರಿಯೆ ಕೈಗೊಳ್ಳಲು ಸಹ ಸೂಚಿಸಲಾಗಿದೆ.
ಸಂಸ್ಥೆಯು ಠೇವಣಿದಾರರಿಗೆ ಹಣ ಮರಳಿ ನೀಡಲು ವಿಫಲವಾಗಿದೆಯೇ, ಭರವಸೆ ನೀಡಿದ ಲಾಭ ಅಥವಾ ಬಡ್ಡಿ ಪಾವತಿಸಿಲ್ಲವೇ, ಅಥವಾ ಠೇವಣಿದಾರರ ಹಿತಕ್ಕೆ ಧಕ್ಕೆ ತರುವ ರೀತಿಯಲ್ಲಿ ವಂಚನೆ ಚಟುವಟಿಕೆ ನಡೆಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯಲಿದೆ.
ಅತ್ಯಂತ ಮಹತ್ವದ ಸಂಗತಿ ಎಂದರೆ, ತನಿಖಾ ವರದಿಯನ್ನು ಆದೇಶ ಸ್ವೀಕರಿಸಿದ 24 ಗಂಟೆಗಳೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಸೂಚಿಸಲಾಗಿದೆ. ಅಗತ್ಯವಿದ್ದರೆ ಕೆಪಿಐಡಿ ಕಾಯ್ದೆಯಡಿ ತಾತ್ಕಾಲಿಕ ಆಸ್ತಿ ಜಪ್ತಿ ಸೇರಿದಂತೆ ಮುಂದಿನ ಕಾನೂನು ಕ್ರಮಗಳ ಶಿಫಾರಸು ಮಾಡುವಂತೆ ಆದೇಶಿಸಲಾಗಿದೆ.
ತನಿಖೆ ಪರಿಣಾಮಕಾರಿಯಾಗಿ ನಡೆಯಲು ಪೊಲೀಸ್ ಇಲಾಖೆ, ಸಂಬಂಧಿತ ಇಲಾಖೆಗಳು ಹಾಗೂ ಅಗತ್ಯವಿದ್ದರೆ ಮಾಹಿತಿ ತಂತ್ರಜ್ಞಾನ ತಜ್ಞರ ಸಹಾಯ ಪಡೆಯಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಕಾನೂನುಬದ್ಧ ನಿರ್ದೇಶನಗಳಿಗೆ ಸಹಕರಿಸದಿದ್ದರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.
ಠೇವಣಿದಾರರಲ್ಲಿ ಆತಂಕ
ಹೆಚ್ಚಿನ ಲಾಭದ ಆಮಿಷಕ್ಕೆ ಹಣ ಹೂಡಿರುವವರು ಈಗ ಆತಂಕಕ್ಕೊಳಗಾಗಿದ್ದಾರೆ. ಜಿಲ್ಲಾಡಳಿತದ ಈ ತುರ್ತು ಕ್ರಮದಿಂದ ಪ್ರಕರಣ ಗಂಭೀರ ತಿರುವು ಪಡೆದಿದ್ದು, ತನಿಖಾ ವರದಿ ಬಳಿಕ ಸಂಸ್ಥೆಯ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಬೆಳಗಾವಿಯಲ್ಲಿ ಇಂತಹ ಠೇವಣಿ ಸಂಗ್ರಹ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ವ್ಯಾಪಕ ಪರಿಶೀಲನೆ ನಡೆಯಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ

bottom of page