ವಿನೋದ ಭಾಗವತ್ ಇನ್ನಿಲ್ಲ
ವಿನೋದ ಭಾಗವತ್ ಇನ್ನಿಲ್ಲ

ನಗು ನಿಲ್ಲಿಸಿದ ವಿನೋದ.
ನಗರಸೇವಕಿ ನೇತ್ರಾವತಿ ಭಾಗವತ್ ಅವರ ಪತಿ ಹಠಾತ್ ನಿಧನ;
ಕುಟುಂಬ, ಬಂಧುಗಳಲ್ಲಿ ಮಡುಗಟ್ಟಿದ ಶೋಕ
ಬೆಳಗಾವಿ:
ಸದಾ ನಗುಮೊಗದಿಂದ ಎಲ್ಲರನ್ನೂ ಮಾತನಾಡಿಸುತ್ತಿದ್ದ ವಿನೋದ ಭಾಗವತ್ (46) ಅವರು ಸೋಮವಾರ ಬೆಳಗಿನ ಜಾವ ಹಠಾತ್ ನಿಧನರಾದರು.
ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ ನಂ. 15ರ ನಗರಸೇವಕಿ ನೇತ್ರಾವತಿ ಭಾಗವತ್ ಅವರ ಪತಿಯಾಗಿದ್ದ ವಿನೋದ ಅವರಿಗೆ ಬೆಳಗಿನ ಜಾವ ದಿಢೀರ್ ಎದೆನೋವು ಕಾಣಿಸಿಕೊಂಡಿತ್ತು.
ಕೆಲವೇ ಕ್ಷಣಗಳಲ್ಲಿ ಅವರ ಬದುಕಿನ ಪಯಣ ಅಂತ್ಯಗೊಂಡಿದ್ದು, ಕುಟುಂಬದವರು ಹಾಗೂ ಆತ್ಮೀಯರನ್ನು ಆಘಾತದ ಮಡುವಿಗೆ ತಳ್ಳಿದೆ.
ವಿನೋದ ಎಂದರೆ ಎಲ್ಲರಿಗೂ ಮೊದಲು ನೆನಪಾಗುತ್ತಿದ್ದುದು ಅವರ ನಗುಮುಖ. ಎಷ್ಟೇ ಒತ್ತಡವಿದ್ದರೂ ಮುಖದ ಮೇಲಿನ ನಗುವನ್ನು ಕಳೆದುಕೊಳ್ಳುತ್ತಿರಲಿಲ್ಲ. ಯಾರೊಂದಿಗೂ ಅನಗತ್ಯ ಮಾತು, ವಾದ–ವಿವಾದಕ್ಕೆ ಇಳಿಯದೆ, ‘ತಾವಾಯಿತು, ತಮ್ಮ ಕೆಲಸವಾಯಿತು’ ಎಂಬ ಸರಳ ಬದುಕನ್ನು ನಡೆಸುತ್ತಿದ್ದರು. ಪರಿಚಿತರು ಎದುರಾದರೆ ನಗುತಾ ಮಾತನಾಡಿಸಿ, ಆತ್ಮೀಯತೆಯಿಂದ ವಿಚಾರಿಸುವುದು ಅವರ ಸಹಜ ಗುಣವಾಗಿತ್ತು.
ನಗರಸೇವಕಿಯಾಗಿರುವ ಪತ್ನಿ ನೇತ್ರಾವತಿ ಅವರ ಸಾರ್ವಜನಿಕ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದ ವಿನೋದ, ಪ್ರಚಾರದಿಂದ ದೂರ ಉಳಿದು ಕುಟುಂಬ ಮತ್ತು ಕೆಲಸದಲ್ಲೇ ಸಂತೋಷ ಕಂಡುಕೊಂಡಿದ್ದರು. ಆದರೆ ಇಂದು ಅವರ ನಗು ಶಾಶ್ವತವಾಗಿ ನಿಂತಿದೆ. ನಿನ್ನೆಯವರೆಗೂ ಮನೆಯೊಳಗೆ ಕೇಳಿಸುತ್ತಿದ್ದ ಅವರ ಮಾತು, ನಗು ಇಂದು ನೆನಪಾಗಿ ಉಳಿದಿದೆ.
ಹಠಾತ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಧುಗಳು, ಸ್ನೇಹಿತರು, ಜನಪ್ರತಿನಿಧಿಗಳು ಹಾಗೂ ವಾರ್ಡ್‌ನ ನಿವಾಸಿಗಳು ಮನೆಗೆ ಧಾವಿಸಿದರು. ವಿನೋದ ಅವರ ನಗುಮುಖವನ್ನು ನೆನಪಿಸಿಕೊಂಡು ಕುಟುಂಬದವರು ಮತ್ತು ಆತ್ಮೀಯರು ಕಣ್ಣೀರಾದರು.
ಮೃತರು ಪತ್ನಿ ನೇತ್ರಾವತಿ ಭಾಗವತ್, ಓರ್ವ ಪುತ್ರಿ, ಪುತ್ರ ಹಾಗೂ ಅಪಾರ ಬಂಧು–ಬಳಗವನ್ನು ಅಗಲಿದ್ದಾರೆ.
ಸದಾ ನಗುತಾ ಬದುಕಿದ ವಿನೋದ ಇಂದು ಮೌನವಾಗಿದ್ದಾರೆ. ಆದರೆ ಅವರ ಆತ್ಮೀಯ ನಗು, ಸರಳ ವ್ಯಕ್ತಿತ್ವ ಹಾಗೂ ಮೃದುವಾದ ಮಾತುಗಳು ಅವರನ್ನು ಬಲ್ಲವರ ಮನದಲ್ಲಿ ಎಂದೆಂದಿಗೂ ಜೀವಂತವಾಗಿರಲಿವೆ.
