;
top of page
< Back

ರ‍್ಯಾಲಿಗೆ ಅನುಮತಿ ಕೊಟ್ಟರೆ ಕಪ್ಪುಮಸಿ ಹೋರಾಟ!

ರ‍್ಯಾಲಿಗೆ ಅನುಮತಿ ಕೊಟ್ಟರೆ ಕಪ್ಪುಮಸಿ ಹೋರಾಟ!

Kannada and Marathi issue

ಜೂನ್‌ 22, 27ರ ಮೆರವಣಿಗೆ ತಡೆಯಲು ಕರುನಾಡ ರಕ್ಷಣಾ ವೇದಿಕೆ ಆಗ್ರಹ
ಅಹಿತಕರ ಘಟನೆ ಸಂಭವಿಸಿದರೆ ಜಿಲ್ಲಾಡಳಿತ–ಪೊಲೀಸ್ ಇಲಾಖೆಯೇ ಹೊಣೆ; ಎಂಇಎಸ್ ಮುಖಂಡರಿಗೆ ನೇರ ಎಚ್ಚರಿಕೆ.

ಬೆಳಗಾವಿ: ಗಡಿ ಜಿಲ್ಲೆಯಲ್ಲಿ ಭಾಷಾ ವೈಷಮ್ಯ ಕೆರಳಿಸಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಉದ್ದೇಶಿತ ರ‍್ಯಾಲಿ ಮತ್ತು ಮೆರವಣಿಗೆಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಎಚ್ಚರಿಕೆಯನ್ನು ಮೀರಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದರೆ ತೀವ್ರ ಹೋರಾಟ ನಡೆಸುವುದರ ಜತೆಗೆ ಎಂಇಎಸ್ ಮುಖಂಡರಿಗೆ ಕಪ್ಪುಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ಗೋಕಾಕದ ಕರುನಾಡ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ನಗರದಲ್ಲಿ ಜೂನ್‌ 22 ಮತ್ತು 27ರಂದು ಎಂಇಎಸ್ ವತಿಯಿಂದ ನಡೆಸಲು ಉದ್ದೇಶಿಸಿರುವ ರ‍್ಯಾಲಿ ಹಾಗೂ ಮೆರವಣಿಗೆಗಳಿಗೆ ಅನುಮತಿ ನಿರಾಕರಿಸುವಂತೆ ಆಗ್ರಹಿಸಿ ವೇದಿಕೆಯ ಮುಖಂಡರು ಶನಿವಾರ ಅಲ್ಲಿನ‌ ತಹಶೀಲ್ದಾರರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಗಡಿ ನೆಲದಲ್ಲಿ ಮತ್ತೆ ಪ್ರಚೋದನೆಯ ಆಟ?.

ಹಲವು ವರ್ಷಗಳಿಂದ ಬೆಳಗಾವಿ ಗಡಿ ಭಾಗದಲ್ಲಿ ಭಾಷೆ ಮತ್ತು ನೆಲದ ವಿಚಾರ ಮುಂದಿಟ್ಟುಕೊಂಡು ಕನ್ನಡ–ಮರಾಠಿ ಭಾಷಿಕರ ನಡುವೆ ದ್ವೇಷದ ವಾತಾವರಣ ನಿರ್ಮಿಸಲು ಎಂಇಎಸ್ ಯತ್ನಿಸುತ್ತಿದೆ. ಕರ್ನಾಟಕದ ನೆಲ, ಜಲ ಮತ್ತು ಭಾಷೆಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವ ಸಂಘಟನೆಗೆ ಬಹಿರಂಗ ರ‍್ಯಾಲಿ ಮತ್ತು ಮೆರವಣಿಗೆ ನಡೆಸಲು ಅವಕಾಶ ನೀಡುವುದು ಸರಿಯಲ್ಲ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
ಗಡಿ ವಿವಾದವನ್ನು ಪದೇ ಪದೇ ಕೆದಕಿ ಜನರ ಭಾವನೆಗಳೊಂದಿಗೆ ಆಟವಾಡುವುದು ಹಾಗೂ ಬೆಳಗಾವಿಯ ಶಾಂತಿ–ಸೌಹಾರ್ದಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ವೇದಿಕೆ ಎಚ್ಚರಿಸಿದೆ.
‘ಶಾಂತಿ ಕದಡಿದರೆ ಅಧಿಕಾರಿಗಳೇ ಹೊಣೆ’
ಎಂಇಎಸ್ ಕಾರ್ಯಕ್ರಮಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮೊದಲೇ ಗಂಭೀರವಾಗಿ ಪರಿಗಣಿಸಬೇಕು. ಉದ್ದೇಶಿತ ರ‍್ಯಾಲಿ ಮತ್ತು ಮೆರವಣಿಗೆಗಳಿಗೆ ಅನುಮತಿ ನಿರಾಕರಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ವೇದಿಕೆಯ ಎಚ್ಚರಿಕೆಯ ಹೊರತಾಗಿಯೂ ಕಾರ್ಯಕ್ರಮಕ್ಕೆ ಅನುಮತಿ ನೀಡಿ, ಬಳಿಕ ಅಹಿತಕರ ಘಟನೆ ಅಥವಾ ಶಾಂತಿ ಭಂಗ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಯನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳೇ ಹೊರಬೇಕಾಗುತ್ತದೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಎಂಇಎಸ್ ಮುಖಂಡರಿಗೆ ಕಪ್ಪುಮಸಿ ಎಚ್ಚರಿಕೆ
ಕರ್ನಾಟಕದಲ್ಲೇ ನೆಲೆಸಿ ರಾಜ್ಯದ ವಿರುದ್ಧ ಘೋಷಣೆ ಕೂಗುವ ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವವರನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಎಂಇಎಸ್ ಮುಖಂಡರು ಗಡಿ ವಿವಾದವನ್ನು ಕೆದಕಿ ಪ್ರಚೋದನಕಾರಿ ಚಟುವಟಿಕೆ ಮುಂದುವರಿಸಿದರೆ ಅವರಿಗೆ ಕಪ್ಪುಮಸಿ ಬಳಿದು ಕನ್ನಡಿಗರ ಆಕ್ರೋಶ ಪ್ರದರ್ಶಿಸಲಾಗುವುದು ಎಂದು ವೇದಿಕೆಯ ಮುಖಂಡರು ನೇರ ಎಚ್ಚರಿಕೆ ನೀಡಿದ್ದಾರೆ.
ಕರುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಎಂಇಎಸ್‌ನ ಉದ್ದೇಶಿತ ಕಾರ್ಯಕ್ರಮಗಳಿಗೆ ಅನುಮತಿ ನೀಡದೆ ಬೆಳಗಾವಿಯಲ್ಲಿ ಶಾಂತಿ, ಸೌಹಾರ್ದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಒತ್ತಾಯಿಸಲಾಗಿದೆ.
ಮಂಜುನಾಥ ಜಲ್ಲಿ,ಯಲ್ಲಪ್ಪ ಬಸರಗಿ, ಬಸ್ಸಪ್ಪ ಕರಡಿಗುದ್ದಿ, ಬಸವರಾಜ ನುಗ್ಯಾನಟ್ಟಿ, ಸದಾಶಿವ ನಾವಿ ಮತ್ತು ದಾನಪ್ಪ ಕಂಬಾರ ಹಾಜರಿದ್ದರು.

bottom of page