;
top of page
< Back

ರಸ್ತೆ ಅಗೆದು ಹಾಗೆ ಬಿಟ್ರೆ ಸುಮ್ಮನಿರಲ್ಕ

ರಸ್ತೆ ಅಗೆದು ಹಾಗೆ ಬಿಟ್ರೆ ಸುಮ್ಮನಿರಲ್ಕ

ಯತೀಂದ್ರ ಪ್ರೆಸ್ ಮೀಟ

ಯತೀಂದ್ರ ಪ್ರೆಸ್ ಮೀಟ

ರಸ್ತೆ ಅಗೆದು ಕೈತೊಳೆದರೆ ಬಿಡುವುದಿಲ್ಲ’
ಎಲ್‌ಆ್ಯಂಡ್‌ಟಿ ಸಂಸ್ಥೆಗೆ ಯತೀಂದ್ರ ಎಚ್ಚರಿಕೆ; ಬೆಳಗಾವಿಗೆ ಅಗತ್ಯ ಯೋಜನೆಗಳ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸುವ ಭರವಸೆ
ಬೆಳಗಾವಿ: ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆಗಾಗಿ ರಸ್ತೆಗಳನ್ನು ಅಗೆದು ತಿಂಗಳುಗಳಾದರೂ ದುರಸ್ತಿ ಮಾಡದೆ ಬಿಟ್ಟಿರುವ ಎಲ್‌ಆ್ಯಂಡ್‌ಟಿ ಸಂಸ್ಥೆಯ ವಿರುದ್ಧ ಡಾ. ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಅಗೆದ ರಸ್ತೆಗಳನ್ನು ಕೂಡಲೇ ಮೂಲ ಸ್ಥಿತಿಗೆ ತರದಿದ್ದರೆ ಸಂಸ್ಥೆಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘24×7 ನೀರು ಪೂರೈಕೆ ಕಾಮಗಾರಿಯ ಒಪ್ಪಂದದಲ್ಲಿಯೇ ರಸ್ತೆಗಳನ್ನು ಅಗೆದು ಪುನಃ ನಿರ್ಮಿಸುವ ವೆಚ್ಚವನ್ನೂ ಸೇರಿಸಲಾಗಿದೆ. ಹೀಗಾಗಿ ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು ಹಾಗೆಯೇ ಬಿಟ್ಟು ಹೋಗುವಂತಿಲ್ಲ. ಎಲ್ಲಿ ರಸ್ತೆ ಹಾಳಾಗಿದೆಯೋ ಅಲ್ಲೆಲ್ಲ ತ್ವರಿತವಾಗಿ ದುರಸ್ತಿ ಮಾಡುವಂತೆ ಎಲ್‌ಆ್ಯಂಡ್‌ಟಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ’ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿದ ರಸ್ತೆಗಳನ್ನೂ ನೀರಿನ ಕೊಳವೆ ಅಳವಡಿಕೆಗಾಗಿ ಅಗೆದು, ಸಮರ್ಪಕವಾಗಿ ಮುಚ್ಚದಿರುವುದರಿಂದ ನಗರದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೂರು–ನಾಲ್ಕು ತಿಂಗಳಿಂದ ರಸ್ತೆ ಹಾಗೆಯೇ ಉಳಿದಿದ್ದರೆ ಅದು ಗಂಭೀರ ಲೋಪ. ಕಾಮಗಾರಿ ಪೂರ್ಣಗೊಳಿಸುವುದರೊಂದಿಗೆ ರಸ್ತೆಯ ಮರುಸ್ಥಾಪನೆಯೂ ಸಂಸ್ಥೆಯ ಹೊಣೆ’ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ ಅವರು, ‘ನಗರ ಮತ್ತು ಜಿಲ್ಲೆಗೆ ತುರ್ತಾಗಿ ಬೇಕಿರುವ ಕಾಮಗಾರಿಗಳನ್ನು ಗುರುತಿಸಲಾಗುವುದು. ಸ್ಥಳೀಯ ಅಗತ್ಯಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಸರ್ಕಾರದ ಗಮನಕ್ಕೆ ತಂದು ಅನುದಾನ ಹಾಗೂ ಯೋಜನೆಗಳನ್ನು ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು’ ಎಂದರು.
‘ಚುನಾವಣೆಗೆ ನಿಲ್ಲದಿದ್ದರೂ ಸಿದ್ದರಾಮಯ್ಯ ಪ್ರಚಾರ ಮಾಡುತ್ತಾರೆ’
2028ರ ವಿಧಾನಸಭಾ ಚುನಾವಣೆಯ ಬಳಿಕ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆಯೇ ಹೇಳಿರುವುದನ್ನು ಯತೀಂದ್ರ ಪುನರುಚ್ಚರಿಸಿದರು.
‘ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರೆ ರಾಜಕಾರಣದಿಂದಲೇ ದೂರವಾಗುತ್ತಾರೆ ಎಂದರ್ಥವಲ್ಲ. ದುರ್ಬಲರು, ಶೋಷಿತರು ಮತ್ತು ಅವಕಾಶವಂಚಿತರ ಪರವಾಗಿ ಧ್ವನಿ ಎತ್ತುವುದನ್ನು ಅವರು ಮುಂದುವರಿಸುತ್ತಾರೆ. ಕಾಂಗ್ರೆಸ್ ಪರವಾಗಿ ರಾಜ್ಯದಾದ್ಯಂತ ಚುನಾವಣಾ ಪ್ರಚಾರದಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಪ್ರಚಾರ ನಡೆಸಲು ಚುನಾವಣೆಗೆ ಸ್ಪರ್ಧಿಸಲೇಬೇಕೆಂಬ ನಿಯಮವಿಲ್ಲ’ ಎಂದು ಹೇಳಿದರು.
ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ, ‘ಪಕ್ಷದ ವರಿಷ್ಠರು ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ನಾಯಕರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ. ಮಾತುಕತೆ ಪೂರ್ಣಗೊಂಡ ಬಳಿಕ ವರಿಷ್ಠರು ಮತ್ತು ಮುಖ್ಯಮಂತ್ರಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

bottom of page