;
top of page
< Back

ಮಲ್ಲೇಶ ಚೌಗಲೆ ನೇಮಕ

ಮಲ್ಲೇಶ ಚೌಗಲೆ ನೇಮಕ

Mallesh chougale appointed as director

ಬೆಳಗಾವಿಯ ಮಲ್ಲೇಶ ಚೌಗುಲೆ ಅವರಿಗೆ ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ನೇಮಕ

ಬೆಳಗಾವಿ, ಆ. 4: ಬೆಳಗಾವಿ ಜಿಲ್ಲೆಯ ಹಿರಿಯ ದಲಿತ ನಾಯಕ, ಸಮಾಜಸೇವಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಲ್ಲೇಶ ಚೌಗುಲೆ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಕುರಿತು ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಧರ್ಮಸೇನ ಅವರು ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಮಲ್ಲೇಶ ಚೌಗುಲೆ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವಿವಿಧ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾರ್ಯನಿರ್ವಹಿಸಿ ಸಂಘಟನೆ ವಿಸ್ತರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಹಿಂದೆ ಅವರು ಕಾಂಗ್ರೆಸ್ ಸೇವಾದಳ ಹಾಗೂ ಕಾಂಗ್ರೆಸ್ ಎಸ್‌ಸಿ–ಎಸ್‌ಟಿ ವಿಭಾಗದ ಜಿಲ್ಲಾ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಸಾಮಾಜಿಕ ಕ್ಷೇತ್ರದಲ್ಲಿಯೂ ಚೌಗುಲೆ ಅವರ ಸೇವೆ ಗಮನಾರ್ಹವಾಗಿದೆ. ದಲಿತ ಸಮುದಾಯದ ಹಕ್ಕುಗಳು, ಸಮಸ್ಯೆಗಳ ಪರಿಹಾರ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಅವರು ನಿರಂತರವಾಗಿ ಹೋರಾಟ ನಡೆಸಿದ್ದು, ಯುವಜನರನ್ನು ಸಂಘಟಿಸುವ ಕೆಲಸದಲ್ಲಿಯೂ ಸಕ್ರಿಯ ಪಾತ್ರ ವಹಿಸಿದ್ದಾರೆ.

ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಅಂತರರಾಷ್ಟ್ರೀಯ ದಲಿತ ಸಾಹಿತ್ಯ ಸಮ್ಮೇಳನದಲ್ಲಿ 'ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಸಾಮಾಜಿಕ ರತ್ನ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ. ಅಲ್ಲದೆ, ಭಾರತ ಸರ್ಕಾರದ ರಾಷ್ಟ್ರೀಯ ಯುವ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯ ಯುವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳ ಗೌರವಗಳು ಅವರಿಗೆ ಲಭಿಸಿವೆ.

ಪ್ರಸ್ತುತ ಅವರು ಅಖಿಲ ಭಾರತೀಯ ದಲಿತ ಯುವ ಸಂಘಟನೆ, ನವದೆಹಲಿ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ಸರ್ಕಾರದ ವಿವಿಧ ಸರ್ಕಾರಿ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಲ್ಲಿಸಿರುವ ದೀರ್ಘಕಾಲದ ಸೇವೆ, ಸಂಘಟನಾ ನಿಷ್ಠೆ, ಸಾಮಾಜಿಕ ಬದ್ಧತೆ ಹಾಗೂ ದಲಿತ ಚಳವಳಿಯಲ್ಲಿ ನೀಡಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ರಾಜ್ಯಮಟ್ಟದ ಜವಾಬ್ದಾರಿ ನೀಡಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಮಲ್ಲೇಶ ಚೌಗುಲೆ ಅವರ ನೇಮಕಕ್ಕೆ ರಾಜಕೀಯ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

bottom of page