ಭಾವಿ ಸಿಎಂ’ ಕಚೇರಿಯ ಮೇಲೆ ದಾಳಿ!
ಭಾವಿ ಸಿಎಂ’ ಕಚೇರಿಯ ಮೇಲೆ ದಾಳಿ!

2028ರಲ್ಲಿ ನಾ ಸಿಎಂ ಆಗಲೇನ್? ಝಟಕಿಯೊಳಗೆ ಸಿಎಂ ಆಗ್ತೇನಿ ಎಂದಿದ್ದ ವಿಡಿಯೋ ಮತ್ತೆ ವೈರಲ್
ಬೆಳಗಾವಿ:
“2028ರಲ್ಲಿ ನಾ ಸಿಎಂ ಆಗಲೇನ್? ಝಟಕಿಯೊಳಗೆ ಸಿಎಂ ಆಗ್ತೇನಿ…” ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಬಂದಿದ್ದ ಶಿವಾನಂದ ಎಸ್. ನೀಲಣ್ಣವರ ಹೆಸರು ಈಗ ಅಧಿಕಾರಿಗಳ ದಾಳಿಯಿಂದ ಮತ್ತೆ ಸದ್ದು ಮಾಡುತ್ತಿದೆ.
ಶಿವಂ ಅಸೋಸಿಯೇಟ್‌ಗೆ ಸಂಬಂಧಿಸಿದೆ ಎನ್ನಲಾದ ಕಚೇರಿಗಳ ಮೇಲೆ ಪೊಲೀಸ್, ಕಂದಾಯ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ ಬೆನ್ನಲ್ಲೇ, ನೀಲಣ್ಣವರ ಅವರ ಹಿಂದಿನ ‘ಭಾವಿ ಸಿಎಂ’ ಹೇಳಿಕೆಯ ವಿಡಿಯೋ ಮತ್ತೆ ವೈರಲ್ ಆಗಿದೆ.
ಜನಸೇವೆ, ರಾಜಕೀಯ ಮಹತ್ವಾಕಾಂಕ್ಷೆ, ದೊಡ್ಡ ಮಟ್ಟದ ಪ್ರಭಾವದ ಮಾತುಗಳಿಂದ ಸುದ್ದಿಯಾಗಿದ್ದ ನೀಲಣ್ಣವರ ಸುತ್ತ ಈಗ ಹಣಕಾಸು ವ್ಯವಹಾರಗಳ ಪ್ರಶ್ನೆಗಳು ಎದ್ದಿವೆ. ಹೆಚ್ಚಿನ ಬಡ್ಡಿ ಭರವಸೆ, ಸಾರ್ವಜನಿಕರಿಂದ ಹಣ ಸಂಗ್ರಹಣೆ, ಹೂಡಿಕೆದಾರರ ವಿವರ ಹಾಗೂ ಸಂಸ್ಥೆಯ ದಾಖಲೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಇದುವರೆಗೆ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾದವರು ಅಧಿಕೃತ ದೂರು ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರದಿರುವುದೂ ಪ್ರಕರಣಕ್ಕೆ ಕುತೂಹಲದ ತಿರುವು ನೀಡಿದೆ.
ವೈರಲ್ ವಿಡಿಯೋಗಳಲ್ಲಿ ‘ಸಿಎಂ’ ಕನಸು; ಅಧಿಕಾರಿಗಳ ಮೇಜಿನ ಮೇಲೆ ಲೆಕ್ಕಪತ್ರಗಳ ಕಡತ—ಇವೆರಡರ ನಡುವೆ ನಿಜ ಯಾವುದು ಎಂಬುದನ್ನು ಮುಂದಿನ ತನಿಖೆಯೇ ಬಯಲಿಗೆಳೆಯಬೇಕಿದೆ.
