ಪ್ರೆಸ್ ಕಾರ್ಡ ಹಿಂದಿನ ವಸೂಲಿ ದಂಧೆಗೆ ಬ್ರೆಕ್ ಹಾಕಿ
ಪ್ರೆಸ್ ಕಾರ್ಡ ಹಿಂದಿನ ವಸೂಲಿ ದಂಧೆಗೆ ಬ್ರೆಕ್ ಹಾಕಿ

ನಕಲಿ ಗುರುತಿನ ಚೀಟಿ, ವಿಸಿಟಿಂಗ್ ಕಾರ್ಡ್ ಬಳಸಿ ಪತ್ರಕರ್ತರ ಸೋಗು
.
ಅಧಿಕಾರಿಗಳು, ಸಾರ್ವಜನಿಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಆರೋಪ.
ಆರ್‌ಟಿಐ ಕಾಯ್ದೆಯ ದುರುಪಯೋಗದ ಮೇಲೂ ನಿಗಾ ವಹಿಸಲು ಆಗ್ರಹ.
ಜಿಲ್ಲಾವಾರು ನಕಲಿ ಪತ್ರಕರ್ತರ ಜಾಲ ಪತ್ತೆಗೆ ವಿಶೇಷ ಕಾರ್ಯಾಚರಣೆ ಒತ್ತಾಯ.
ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಡಿಜಿಪಿ ಭರವಸೆ.
ಬೆಂಗಳೂರು:
ಪತ್ರಿಕೋದ್ಯಮದ ಹೆಸರನ್ನೇ ಗುರಾಣಿಯಾಗಿಸಿಕೊಂಡು ಬೆದರಿಕೆ, ಬ್ಲ್ಯಾಕ್‌ಮೇಲ್ ಹಾಗೂ ಹಣ ವಸೂಲಿ ನಡೆಸುತ್ತಿರುವ ನಕಲಿ ಪತ್ರಕರ್ತರ ಜಾಲವನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗವು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಪತ್ರಿಕೋದ್ಯಮದೊಂದಿಗೆ ಯಾವುದೇ ಸಂಬಂಧವಿಲ್ಲದ ಕೆಲವರು ನಕಲಿ ವಿಸಿಟಿಂಗ್ ಕಾರ್ಡ್, ಗುರುತಿನ ಚೀಟಿ ಮತ್ತು ಸಂಘಟನೆಗಳ ಹೆಸರನ್ನು ಬಳಸಿಕೊಂಡು ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವ ಗಂಭೀರ ಬೆಳವಣಿಗೆಯನ್ನು ಗಮನಕ್ಕೆ ತಂದಿದೆ.
ಗುರುತಿನ ಚೀಟಿಯೇ ಬಂಡವಾಳ!
ಸುದ್ದಿ ಬರೆಯುವ ಅರ್ಹತೆಯೂ ಇಲ್ಲ, ಯಾವುದೇ ಅಧಿಕೃತ ಮಾಧ್ಯಮ ಸಂಸ್ಥೆಯೊಂದಿಗೂ ಸಂಬಂಧವಿಲ್ಲ. ಆದರೂ ‘ಪತ್ರಕರ್ತ’ ಎಂಬ ಗುರುತಿನ ಚೀಟಿಯೇ ಇವರಿಗೆ ಬಂಡವಾಳ. ಅಧಿಕಾರಿಗಳ ಕಚೇರಿ, ಪೊಲೀಸ್ ಠಾಣೆ, ಸ್ಥಳೀಯ ಸಂಸ್ಥೆಗಳಿಗೆ ತೆರಳಿ ಒತ್ತಡ ಹೇರುವುದು, ದೂರುಗಳ ಬೆದರಿಕೆ ಹಾಕುವುದು ಹಾಗೂ ಹಣಕ್ಕೆ ಬೇಡಿಕೆ ಇಡುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ನಿಯೋಗ ಆತಂಕ ವ್ಯಕ್ತಪಡಿಸಿದೆ.
ಇಂತಹವರ ಕೃತ್ಯಗಳಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ನೈಜ ಪತ್ರಕರ್ತರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತಿದೆ. ಇಡೀ ಪತ್ರಿಕಾ ಸಮುದಾಯವನ್ನೇ ಸಾರ್ವಜನಿಕರು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಂಘ ತಿಳಿಸಿದೆ.
ಆರ್‌ಟಿಐ ಹೆಸರಿನಲ್ಲಿ ‘ವಸೂಲಿ ಅಸ್ತ್ರ’
ಮಾಹಿತಿ ಹಕ್ಕು ಕಾಯ್ದೆಯನ್ನು ಸಾರ್ವಜನಿಕ ಹಿತದ ಬದಲಾಗಿ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ಗೆ ಬಳಸಿಕೊಳ್ಳುತ್ತಿರುವವರ ಮೇಲೂ ಪೊಲೀಸ್ ಇಲಾಖೆ ನಿಗಾ ವಹಿಸಬೇಕು. ಸರಣಿ ಆರ್‌ಟಿಐ ಅರ್ಜಿ, ಸುಳ್ಳು ದೂರು ಹಾಗೂ ಪತ್ರಿಕಾ ಸಂಘಟನೆಗಳ ಹೆಸರಿನಲ್ಲಿ ಅಧಿಕಾರಿಗಳಿಗೆ ಒತ್ತಡ ಹೇರುವವರ ಹಿನ್ನೆಲೆ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.
ಪೊಲೀಸ್ ಠಾಣೆಗಳಿಗೆ ಪದೇ ಪದೇ ಆಧಾರರಹಿತ ದೂರು ನೀಡುವವರು, ಪತ್ರಕರ್ತರೆಂದು ಸುಳ್ಳು ಗುರುತು ಪ್ರದರ್ಶಿಸುವವರು ಮತ್ತು ಸಂಘಟನೆಗಳ ಹೆಸರಿನಲ್ಲಿ ವಸೂಲಿ ನಡೆಸುವವರ ಕುರಿತು ಜಿಲ್ಲಾವಾರು ಮಾಹಿತಿ ಸಂಗ್ರಹಿಸಿ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ ಡಾ. ಎಂ.ಎ. ಸಲೀಂ, ಆರೋಪಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಕೆಯುಡಬ್ಲೂಜೆ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಕಾರ್ಯದರ್ಶಿಗಳಾದ ಸೋಮಶೇಖರ ಕೆರಗೋಡು ಮತ್ತು ನಿಂಗಪ್ಪ ಚಾವಡಿ ಹಾಗೂ ಖಜಾಂಚಿ ವಾಸುದೇವ ಹೊಳ್ಳ ಉಪಸ್ಥಿತರಿದ್ದರು.
