;
top of page
< Back

ಪಾಲಿಕೆ ಠರಾವಿಗೆ ಸಬ್ ಜುಡಿಸ್ ನೆಪ‌ ಬೇಡ

ಪಾಲಿಕೆ ಠರಾವಿಗೆ ಸಬ್ ಜುಡಿಸ್ ನೆಪ‌ ಬೇಡ

Corporation

ಬೆಳಗಾವಿ ಪಾಲಿಕೆ ನಿರ್ಣಯಕ್ಕೆ
‘ಸಬ್‌ ಜುಡಿಸ್’ ನೆಪ ಸರಿಯಲ್ಲ: ಮೋಹನ ಕಾತರಕಿ
ಬೆಳಗಾವಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯ ಕೈಗೊಳ್ಳಲು ಸುಪ್ರೀಂ ಕೋರ್ಟ್‌ನಲ್ಲಿರುವ ಗಡಿ ವಿವಾದ ಅಡ್ಡಿಯಾಗುವುದಿಲ್ಲ. ಗಡಿ ಪ್ರಕರಣ ಬಾಕಿಯಿದೆ ಎಂಬ ಕಾರಣಕ್ಕೆ ‘ಸಬ್‌ ಜುಡಿಸ್’ ನೆಪ ಮುಂದಿಟ್ಟು ಬೆಳಗಾವಿ ಮಹಾನಗರ ಪಾಲಿಕೆಯ ಸಾಂಕೇತಿಕ ನಿರ್ಣಯವನ್ನು ತಡೆಯುವುದು ಕಾನೂನು ದೃಷ್ಟಿಯಿಂದ ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಹಾಗೂ ಗಡಿ, ಜಲ ವಿವಾದಗಳ ತಜ್ಞ ಮೋಹನ ಕಾತರಕಿ ಸ್ಪಷ್ಟಪಡಿಸಿದರು.
ನಗರದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಬೆಳಗಾವಿ ಕರ್ನಾಟಕದ ಭಾಗ ಎಂಬುದು ಕೇವಲ ಭಾವನಾತ್ಮಕ ಹೇಳಿಕೆ ಅಲ್ಲ; ಅದು 1956ರ ರಾಜ್ಯಗಳ ಮರುರಚನಾ ಕಾಯ್ದೆಯ ಮೂಲಕ ಸಂಸತ್ತು ಕೈಗೊಂಡ ಸಂವಿಧಾನಾತ್ಮಕ ನಿರ್ಧಾರ ಎಂದು ಹೇಳಿದರು.
“ಮಹಾರಾಷ್ಟ್ರ ಹೂಡಿರುವ ದಾವೆಯ ಮೆರಿಟ್‌ ಕುರಿತು ನ್ಯಾಯಾಲಯದ ಹೊರಗೆ ಚರ್ಚೆ ಮಾಡುವುದು ಸೂಕ್ತವಲ್ಲ. ಆದರೆ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಕಾನೂನು ಸ್ಥಿತಿಯನ್ನು ಪಾಲಿಕೆ ಸಾಂಕೇತಿಕವಾಗಿ ಪುನರುಚ್ಚರಿಸುವುದು ನ್ಯಾಯಾಲಯದ ವಿಚಾರದಲ್ಲಿ ಹಸ್ತಕ್ಷೇಪವಾಗುವುದಿಲ್ಲ. ಆದ್ದರಿಂದ ‘ಸಬ್‌ ಜುಡಿಸ್’ ನೆಪ ಈ ಸಂದರ್ಭದಲ್ಲಿ ಸರಿಯಲ್ಲ,” ಎಂದು ಕಾತರಕಿ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ–1976ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಸಂಸ್ಥೆ. ಹೀಗಾಗಿ, ಬೆಳಗಾವಿ ಕರ್ನಾಟಕದ ಆಡಳಿತಾತ್ಮಕ ವ್ಯವಸ್ಥೆಯ ಭಾಗ ಎಂಬ ನಿಲುವನ್ನು ನಿರ್ಣಯದ ಮೂಲಕ ವ್ಯಕ್ತಪಡಿಸುವುದು ಕಾನೂನಿನ ಚೌಕಟ್ಟಿನೊಳಗೆಯೇ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
“ಪಾಲಿಕೆ ನಿರ್ಣಯ ಕೈಗೊಳ್ಳಬೇಕೋ ಬೇಡವೋ ಎಂಬುದು ರಾಜಕೀಯ ಮತ್ತು ಆಡಳಿತಾತ್ಮಕ ವಿವೇಚನೆಯ ವಿಷಯವಾಗಬಹುದು. ಆದರೆ ಕಾನೂನು ತಡೆ ಇದೆ ಎಂದು ಹೇಳುವುದು ಸರಿಯಲ್ಲ. ರಾಜ್ಯ ಸರ್ಕಾರದಿಂದ ಮಾರ್ಗದರ್ಶನ ಪಡೆಯಬಹುದು; ಅಂತಿಮ ನಿರ್ಧಾರ ಪಾಲಿಕೆ ಮತ್ತು ಸರ್ಕಾರಕ್ಕೆ ಸೇರಿದ್ದು,” ಎಂದರು.
ಗಡಿ ವಿಚಾರದಲ್ಲಿ ಕನ್ನಡ ಸಂಘಟನೆಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಮೌನವಾಗಬಾರದು. ಕಾನೂನುಬದ್ಧ, ಅಹಿಂಸಾತ್ಮಕ ಮತ್ತು ಶಾಂತಿಯುತ ರೀತಿಯಲ್ಲಿ ಜವಾಬ್ದಾರಿಯುತ ಒತ್ತಡ ಮುಂದುವರಿಸಬೇಕು ಎಂದು ಕಾತರಕಿ ಸಲಹೆ ನೀಡಿದರು.
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳೂಕರ, ವಾಜಿದ್ ಹಿರೇಕೋಡಿ ಮತ್ತಿತರರು ಉಪಸ್ಥಿತರಿದ್ದರು.

bottom of page