ನೇಕಾರ ಸಮಾಜ ಶ್ರಮ, ಸ್ಚಾಭಿಮಾನದ ಪ್ರತೀಕ- ಅಭಯ ಪಾಟೀಲ
ನೇಕಾರ ಸಮಾಜ ಶ್ರಮ, ಸ್ಚಾಭಿಮಾನದ ಪ್ರತೀಕ- ಅಭಯ ಪಾಟೀಲ

ಶಾಸಕ ಅಭಯ ಪಾಟೀಲ ಮಾತು.
'ನೇಕಾರ ಸಮಾಜ ಶ್ರಮ, ಸ್ವಾಭಿಮಾನದ ಪ್ರತೀಕ'
ಬೆಳಗಾವಿ:
ನೇಕಾರ ಸಮಾಜವು ಶ್ರಮವನ್ನೇ ಬದುಕಿನ ಬಂಡವಾಳವಾಗಿಸಿಕೊಂಡ ಸ್ವಾಭಿಮಾನಿ ಸಮುದಾಯವಾಗಿದೆ. ಈ ಸಮುದಾಯದ ಎಲ್ಲ ಒಳಪಂಗಡಗಳನ್ನು ಒಂದೇ ವೇದಿಕೆಗೆ ತಂದು ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
ಅಖಿಲ ಭಾರತ ದೇವಾಂಗ ಜನಾಂಗದ ಜಗದ್ಗುರು ಶ್ರೀ ದಯಾನಂದ ಪುರಿ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೇಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೇಕಾರ ಸಮುದಾಯದ ದೇವಾಂಗ, ಕುರುಹಿನಶೆಟ್ಟಿ, ಸಕುಳಸಾಳಿ, ಪಟ್ಟಸಾಲಿ, ಪದ್ಮಸಾಲಿ ಹಾಗೂ ನಾಮದೇವ ಶಿಂಪಿ ಸೇರಿದಂತೆ ವಿವಿಧ ಒಳಪಂಗಡಗಳನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸಿರುವುದು ಸಮಾಜದ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.
125ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಗುರುತಿಸಿ ಗೌರವಿಸುವುದರಿಂದ ಅವರ ಮುಂದಿನ ಸಾಧನೆಗೆ ಹೊಸ ಉತ್ಸಾಹ ದೊರೆಯಲಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ನೇಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ಸಮಾಜದ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುತ್ತವೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಳಗಾವಿ ಉಪ ಪೊಲೀಸ್ ಆಯುಕ್ತ ನಾರಾಯಣ ಬರಮನಿ, ಶಿಕ್ಷಣವು ಮಕ್ಕಳ ಭವಿಷ್ಯವನ್ನು ರೂಪಿಸುವ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಆರ್ಥಿಕ ಸಂಕಷ್ಟ, ಬಡತನ ಹಾಗೂ ಸಾಮಾಜಿಕ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಗೌರವಿಸುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರತಿಭಾ ಪುರಸ್ಕಾರವು ಕೇವಲ ಒಂದು ಪ್ರಶಸ್ತಿಯಲ್ಲ; ಇನ್ನಷ್ಟು ಎತ್ತರಕ್ಕೆ ಏರಲು ನೀಡುವ ಪ್ರೇರಣೆಯಾಗಿದೆ ಎಂದರು.
ನೇಕಾರ ಸಮುದಾಯವು ಶ್ರಮ, ಶಿಸ್ತು ಮತ್ತು ಸ್ವಾಭಿಮಾನಕ್ಕೆ ಹೆಸರುವಾಸಿಯಾಗಿದೆ. ಪೋಷಕರು ತಮ್ಮ ಕಷ್ಟಗಳನ್ನು ಮಕ್ಕಳಿಗೆ ತೋರಿಸದೆ ಉತ್ತಮ ಶಿಕ್ಷಣ ಕೊಡಿಸಲು ಶ್ರಮಿಸುತ್ತಾರೆ. ವಿದ್ಯಾರ್ಥಿ ಗಳು ಪೋಷಕರ ತ್ಯಾಗವನ್ನು ಅರಿತು, ನಿರಂತರ ಅಧ್ಯಯನದ ಮೂಲಕ ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು
ಸಂಘಟಕ ಗಜಾನನ ಗುಂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನಪ್ಪ ವಾಗೂಕರ ಅಧ್ಯಕ್ಷತೆ ವಹಿಸಿದ್ದರು.
ಶಂಕರಣ್ಣ ಮುರುಡಿ, ಲಕ್ಷ್ಮಣ ಜೋಗಿನ, ಭುಜಂಗ ಭಂಡಾರಿ ಹಾಗೂ ಶಿವರಾಜ ಮುರುಡಿ ಅವರಿಗೆ ನೇಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
