ನೀರಿನ ಸಮಸ್ಯೆ-ಅಧಿಕಾರಿಗಳ ಬೆಂಡೆತ್ತಿದ ಅಭಯ ಪಾಟೀಲ
ನೀರಿನ ಸಮಸ್ಯೆ-ಅಧಿಕಾರಿಗಳ ಬೆಂಡೆತ್ತಿದ ಅಭಯ ಪಾಟೀಲ

ನೀರು ಕೊಡ್ತೀರೋ... ಶೆರೆ ಕೊಡ್ತೀರೋ?
ಗುಮ್ಮಟ ಮಾಳಾ ಸಭೆಯಲ್ಲಿ ಅಧಿಕಾರಿಗಳ ಬೆಂಡೆತ್ತಿದ ಅಭಯ ಪಾಟೀಲ
ಉತ್ತರಕ್ಕೆ ಎರಡು ಕನೆಕ್ಷನ್; ದಕ್ಷಿಣಕ್ಕೆ ನಿಯಮದ ನೆಪ ಯಾಕೆ? | ₹3 ಸಾವಿರ ವಸೂಲಿ ಆರೋಪಕ್ಕೆ ಕೆಂಡಾಮಂಡಲ | 72 ಸಭೆಯಾದರೂ ಅವ್ಯವಸ್ಥೆ ಅದೇ!
ಬೆಳಗಾವಿ:
24x7 ಕುಡಿಯುವ ನೀರು ಯೋಜನೆ ಹೆಸರಿನಲ್ಲಿ ಆರು ವರ್ಷಗಳಿಂದ ನಗರದಲ್ಲಿ ರಸ್ತೆ ತೋಡಿ, ಗುಂಡಿ ಬಿಟ್ಟು, ಜನರ ತಾಳ್ಮೆ ಪರೀಕ್ಷಿಸುತ್ತಿರುವ ಎಲ್ ಆ್ಯಂಡ್ ಟಿ ಹಾಗೂ ಕೆ.ಯು.ಡಬ್ಲ್ಯು.ಎಸ್ ಅಧಿಕಾರಿಗಳ ವಿರುದ್ಧ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ತೀವ್ರ ಗರಂ ಆದರು.
ಗುಮ್ಮಟ ಮಾಳಾದಲ್ಲಿ ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ನಗರಸೇವಕರು ಮತ್ತು ಅಧಿಕಾರಿಗಳ ಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆಯೇ ನೀರಿನ ಸಮಸ್ಯೆ, ಅರ್ಧಕ್ಕೆ ಬಿಟ್ಟ ಕಾಮಗಾರಿ, ರಸ್ತೆ ಪುನರ್‌ಸ್ಥಾಪನೆ ವಿಳಂಬ, ಗಟಾರಿನಲ್ಲಿ ಪೈಪ್‌ಲೈನ್ ಅಳವಡಿಕೆ, ಕನೆಕ್ಷನ್ ಗೊಂದಲ ಹಾಗೂ ಹಣ ವಸೂಲಿ ಆರೋಪಗಳ ಸುರಿಮಳೆ ಸುರಿಯಿತು. ದೂರುಗಳ ಹೊಡೆತಕ್ಕೆ ಎಲ್ ಆ್ಯಂಡ್ ಟಿ ಮತ್ತು ಕೆ.ಯು.ಡಬ್ಲ್ಯು.ಎಸ್ ಅಧಿಕಾರಿಗಳು ತಬ್ಬಿಬ್ಬಾದರು.
“ನೀರು ಕೊಡ್ತೀರೋ... ಶೆರೆ ಕೊಡ್ತೀರೋ? ಉತ್ತರ ಭಾಗದಲ್ಲಿ ಒಂದೇ ಮನೆಗೆ ಎರಡು ಕನೆಕ್ಷನ್ ಕೊಡುತ್ತೀರಿ. ದಕ್ಷಿಣ ಭಾಗದಲ್ಲಿ ಕೊಡಲ್ಲ ಅಂತ ನಿಯಮ ತೋರಿಸುತ್ತೀರಿ. ಉತ್ತರಕ್ಕೆ ಒಂದು ನಿಯಮ, ದಕ್ಷಿಣಕ್ಕೆ ಇನ್ನೊಂದು ನಿಯಮನಾ?” ಎಂದು ಶಾಸಕ ಅಭಯ ಪಾಟೀಲ ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿದರು.
ಪ್ರತಿ ನೀರಿನ ಕನೆಕ್ಷನ್‌ಗೆ ₹3 ಸಾವಿರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಸಭೆಯಲ್ಲಿ ಪ್ರಸ್ತಾಪವಾದಾಗ ಶಾಸಕರು ಇನ್ನಷ್ಟು ಕೆರಳಿದರು. “ಜನರು ನೀರಿಗಾಗಿ ಹಪಹಪಿಸುತ್ತಿದ್ದಾರೆ. ನೀವು ಕನೆಕ್ಷನ್ ಹೆಸರಿನಲ್ಲಿ ಹಣ ಕೇಳುತ್ತಿದ್ದೀರಾ? ಎರಡು ಕನೆಕ್ಷನ್ ಕೊಡಲು ಶೆರೆ ಕುಡಿದು ಹೋಗ್ತೀರೋ ಏನು? ಸ್ಪಷ್ಟ ಉತ್ತರ ಕೊಡಿ” ಎಂದು ತರಾಟೆಗೆ ತೆಗೆದುಕೊಂಡರು.
“72 ಸಭೆ ಮಾಡಿದರೂ ಕೆಲಸ ಸರಿಯಾಗಿಲ್ಲ. ಆರು ವರ್ಷಗಳಿಂದ ಪ್ಲಾನಿಂಗ್ ಇಲ್ಲದೇ ಕಾಮಗಾರಿ ಮಾಡುತ್ತಿದ್ದೀರಿ. ಪ್ರತಿವರ್ಷ ಅದೇ ಕಾರಣ, ಅದೇ ನೆಪ, ಅದೇ ಗುಂಡಿ! ಬರೀ ರಸ್ತೆ ತೋಡಿ ಹೋಗೋದೇ ನಿಮ್ಮ ಕೆಲಸನಾ? ಆಗುವುದಾದರೆ ಮಾಡಿ; ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ” ಎಂದು ಅಭಯ ಪಾಟೀಲ ಖಡಕ್ ಎಚ್ಚರಿಕೆ ನೀಡಿದರು.
ಎಲ್ಲಿ ಎಲ್ಲಿ ಕಾಮಗಾರಿ ಅರ್ಧಕ್ಕೆ ನಿಂತಿದೆ, ಎಲ್ಲಿ ನೀರಿನ ಸಮಸ್ಯೆ ಇದೆ, ಎಲ್ಲಿ ರಸ್ತೆ ಪುನರ್‌ಸ್ಥಾಪನೆ ಬಾಕಿ ಇದೆ ಎಂಬ ಸಂಪೂರ್ಣ ಪಟ್ಟಿ ತಕ್ಷಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮುಖ್ಯರಸ್ತೆ ಕತ್ತರಿಸಲು ಅವಕಾಶವಿಲ್ಲ. ಒಳರಸ್ತೆಗಳಲ್ಲಿ ಕೆಲಸ ಮಾಡುವ ಮೊದಲು ಸಂಬಂಧಿಸಿದ ನಗರಸೇವಕರ ಅನುಮತಿ ಕಡ್ಡಾಯ. ಕೆಇಬಿ ಹಾಗೂ ಮೇಘಾ ಗ್ಯಾಸ್ ಅಧಿಕಾರಿಗಳಿಗೆ ಮುಂಚಿತ ಮಾಹಿತಿ ನೀಡದೆ ಪೈಪ್‌ಲೈನ್ ಕಾಮಗಾರಿ ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಲಾಯಿತು.
“ನಾಳೆಯೊಳಗೆ ನೀರಿನ ವ್ಯವಸ್ಥೆ ಸರಿಯಾಗಬೇಕು. ಸೋಮವಾರದೊಳಗೆ ರಸ್ತೆ ಪುನರ್‌ಸ್ಥಾಪನೆ ಆಗಬೇಕು. ಗಟಾರಿನಲ್ಲಿ ಪೈಪ್‌ಲೈನ್ ಹಾಕಿದ್ದೇಕೆ? ಒಳಗಿನಿಂದ ಹಾಕಬೇಕು ಅನ್ನೋದು ಗೊತ್ತಿಲ್ಲವೇ? ಜನರ ಸಹನೆಗೆ ಮಿತಿ ಇದೆ. ಇನ್ನು ನಿರ್ಲಕ್ಷ್ಯ ನಡೆದರೆ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಶಾಸಕ ಅಭಯ ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಪಾಲಿಕೆ ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ ಮುಂತಾದವರು ಹಾಜರಿದ್ದರು.
