;
top of page
< Back

ನಾಲ್ಕು ವರ್ಷದ ನಾಪತ್ತೆ ಪ್ರಕರಣಕ್ಕೆ ‘ನ್ಯಾಟ್‌ಗ್ರಿಡ್’ ಸುಳಿವು

ನಾಲ್ಕು ವರ್ಷದ ನಾಪತ್ತೆ ಪ್ರಕರಣಕ್ಕೆ ‘ನ್ಯಾಟ್‌ಗ್ರಿಡ್’ ಸುಳಿವು

Crime..

ಗುಜರಾತ್‌ನಲ್ಲಿ ಪತ್ತೆಯಾದ ಹಾರೂಗೇರಿಯ ರೈತ
2020ರಲ್ಲಿ ಮನೆಯಿಂದ ಕಾಣೆಯಾಗಿದ್ದ ಅಬ್ದುಲಗಣಿ ಪೆಂಡಾರಿ; ತಂತ್ರಜ್ಞಾನ ಬಳಸಿ ಪ್ರಕರಣ ಭೇದಿಸಿದ ಪೊಲೀಸರು
ಬೆಳಗಾವಿ:
ನಾಲ್ಕು ವರ್ಷಗಳ ಹಿಂದೆ ಮನೆಯಿಂದ ಕಾಣೆಯಾಗಿ, ಹುಡುಕಾಟಕ್ಕೂ ಸಿಗದೆ ಪ್ರಕರಣ ಕಡತಗಳಲ್ಲಿ ಮೌನವಾಗಿದ್ದ ವ್ಯಕ್ತಿಯೊಬ್ಬರನ್ನು ಹಾರೂಗೇರಿ ಪೊಲೀಸರು ಅತ್ಯಾಧುನಿಕ ‘Natgrid’ ತಂತ್ರಜ್ಞಾನದ ನೆರವಿನಿಂದ ಗುಜರಾತ್ ರಾಜ್ಯದಲ್ಲಿ ಪತ್ತೆಹಚ್ಚಿದ್ದಾರೆ.
ರಾಯಬಾಗ ತಾಲ್ಲೂಕಿನ ಹಾರೂಗೇರಿ ಹಿರೇಹಳ್ಳ ತೋಟದ ನಿವಾಸಿ, 41 ವರ್ಷದ ರೈತ ಅಬ್ದುಲಗಣಿ ಗೌಸ್ ಪೆಂಡಾರಿ ಅಲಿಯಾಸ್ ಜಮಾದಾರ ಅವರು 2020ರ ಜನವರಿ 19ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಮನೆಯಿಂದ ಯಾರಿಗೂ ಹೇಳದೆ ಹೊರಟು ನಾಪತ್ತೆಯಾಗಿದ್ದರು. ಈ ಕುರಿತು ಅವರ ಕುಟುಂಬದವರು ಹುಡುಕಾಟ ನಡೆಸಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ, 65 ವರ್ಷದ ಹಯಾತಬಿ ಗೌಸ್ ಪೆಂಡಾರಿ ಅವರು 2020ರ ಮಾರ್ಚ್ 18ರಂದು ಹಾರೂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಠಾಣೆಯಲ್ಲಿ ಅಪರಾಧ ಸಂಖ್ಯೆ 0052/2020 ಅಡಿಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು. ಆರಂಭಿಕ ತನಿಖೆ ಹಾಗೂ ಹುಡುಕಾಟದ ನಡುವೆಯೂ ಕಾಣೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗದ ಕಾರಣ, ಪ್ರಕರಣವನ್ನು ತಾತ್ಕಾಲಿಕವಾಗಿ ‘ಸಿ ನಾಪತ್ತೆ’ ಎಂದು ಮುಕ್ತಾಯಗೊಳಿಸಲಾಗಿತ್ತು.
ಆದರೆ, ಇತ್ತೀಚೆಗೆ ಹಾರೂಗೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಹಳೆಯ ನಾಪತ್ತೆ ಪ್ರಕರಣಗಳ ಮರುಪರಿಶೀಲನೆ ವೇಳೆ ನ್ಯಾಟ್‌ಗ್ರಿಡ್ ತಂತ್ರಜ್ಞಾನ ಬಳಸಿದ್ದಾರೆ. ಆ ಮೂಲಕ ಕಾಣೆಯಾಗಿದ್ದ ಅಬ್ದುಲಗಣಿ ಅವರು ಗುಜರಾತ್ ರಾಜ್ಯದ ಆನಂದನಗರ ಪ್ರದೇಶದಲ್ಲಿರುವುದು ಖಚಿತವಾಗಿದೆ.
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ, ಅಥಣಿ ಉಪವಿಭಾಗದ ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ ಹಾಗೂ ಹಾರೂಗೇರಿ ವೃತ್ತದ ಸಿಪಿಐ ರತನಕುಮಾರ ಜೀರಗ್ಯಾಳ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಾಳಪ್ಪ ಪೂಜಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಸಿಬ್ಬಂದಿ ಎಸ್. ಎ. ಬೇವನೂರ ಗುಜರಾತ್‌ಗೆ ತೆರಳಿ, ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣವನ್ನು ತಂತ್ರಜ್ಞಾನದ ಸಮರ್ಥ ಬಳಕೆಯಿಂದ ಭೇದಿಸಿರುವ ಹಾರೂಗೇರಿ ಪೊಲೀಸರ ಕಾರ್ಯಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಳೆಯ ಪ್ರಕರಣಗಳಿಗೂ ಆಧುನಿಕ ತಂತ್ರಜ್ಞಾನ ಹೊಸ ದಾರಿ ತೋರಿಸಬಹುದು ಎಂಬುದಕ್ಕೆ ಈ ಕಾರ್ಯಾಚರಣೆ ಸಾಕ್ಷಿಯಾಗಿದೆ.

bottom of page