;
top of page
< Back

ನನ್ನನ್ನು ಅಪರಾಧಿ‌ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ

ನನ್ನನ್ನು ಅಪರಾಧಿ‌ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ

Conspiracy Afoot to Brand Me a Criminal,” Alleges Vijayendra.

‘ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ’
ಸ್ವಪಕ್ಷೀಯರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಹಿರಂಗ ಅಸಮಾಧಾನ

‘ಹೊಂದಾಣಿಕೆ ರಾಜಕಾರಣದ ಆರೋಪದಿಂದ ಪಕ್ಷಕ್ಕೆ ಲಾಭವಿಲ್ಲ;

ಮೊದಲು ಕಾರ್ಯಕರ್ತರ ವಿಶ್ವಾಸ ಗಳಿಸಬೇಕು’

ದಾವಣಗೆರೆ:
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನವನ್ನು ನೆಪವಾಗಿಸಿಕೊಂಡು ತಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ‌ನಡೆ್ ಪಕ್ಷದ‌ ಕಾರ್ಯಕ್ರಮದಲ್ಲಿ ಅವರು‌ ಮುಕ್ತವಾಗಿ‌ ಮಾತನಾಡಿದರು.
‘ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದಿದೆ. ಆದರೆ, ಕೆಲವೆಡೆ ಅಡ್ಡಮತದಾನ ನಡೆದಿದೆ ಎಂಬುದನ್ನೇ ಮುಂದಿಟ್ಟುಕೊಂಡು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಚರ್ಚೆ ನಡೆಯಿತು. ನನ್ನ ವಿರುದ್ಧ ಅನುಮಾನ ಮೂಡಿಸುವ ಹಾಗೂ ಅಪರಾಧಿಯಂತೆ ಬಿಂಬಿಸುವ ಪ್ರಯತ್ನವೂ ನಡೆಯಿತು. ಹೊರಗಿನವರಿಗಿಂತ ನಮ್ಮ ಪಕ್ಷದವರೇ ಹೆಚ್ಚು ಮಾತನಾಡುತ್ತಿರುವುದು ನೋವಿನ ಸಂಗತಿ’ ಎಂದು ಹೇಳಿದರು.
‘ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವೆ ಹೊಂದಾಣಿಕೆ ರಾಜಕಾರಣವಿದೆ, ವಿಜಯೇಂದ್ರ ಹಾಗೂ ಡಿ.ಕೆ. ಶಿವಕುಮಾರ್ ಆತ್ಮೀಯರು ಎಂಬ ಆರೋಪಗಳನ್ನು ನಮ್ಮವರೇ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ’ ಎಂದು ಕಿಡಿಕಾರಿದರು.
‘ಹಿರಿಯ ನಾಯಕರ ತ್ಯಾಗ ಮರೆಯಬಾರದು’
ರಾಜ್ಯದಲ್ಲಿ ಬಿಜೆಪಿಯನ್ನು ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಪಕ್ಷದಿಂದ ಹಳ್ಳಿ–ಹಳ್ಳಿಗೂ ಕೊಂಡೊಯ್ದು ಅಧಿಕಾರಕ್ಕೆ ತರುವಲ್ಲಿ ಹಿರಿಯ ನಾಯಕರ ಅಪಾರ ಪರಿಶ್ರಮವಿದೆ. ಅನಂತಕುಮಾರ್ ಮತ್ತು ಬಿ.ಎಸ್. ಯಡಿಯೂರಪ್ಪ ಅವರಂತಹ ನಾಯಕರು ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ಅವರ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ದುಡಿದಿದ್ದಾರೆ ಎಂದು ಸ್ಮರಿಸಿದರು.
‘ಅಂತಹ ಹಿರಿಯ ನಾಯಕರ ನಿಷ್ಠೆಯ ಬಗ್ಗೆಯೇ ಅನುಮಾನ ಹುಟ್ಟಿಸುವ ಕೆಲಸವನ್ನು ನಮ್ಮವರೇ ಮಾಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಆತ್ಮೀಯರು ಎಂದು ಹೇಳಲಾಗುತ್ತಿದೆ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಅವರ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಿದ್ದು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ. ಹಲವು ಪ್ರಕರಣಗಳು ಈಗಲೂ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ’ ಎಂದರು.
‘ಮಂಜುನಾಥ್ ಗೆಲುವೇ ಆರೋಪಗಳಿಗೆ ಉತ್ತರ’
ತಮಗೆ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೊಂದಾಣಿಕೆ ಇದೆ ಎಂಬ ಆರೋಪವನ್ನು ತಳ್ಳಿಹಾಕಿದ ವಿಜಯೇಂದ್ರ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದ ಘಟನೆಯನ್ನು ಉದಾಹರಿಸಿದರು.
‘ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಅಲೆಯ ನಡುವೆಯೂ ರಾಜ್ಯದಲ್ಲಿ ಅತಿ ಹೆಚ್ಚು ಬಿಜೆಪಿ ಸಂಸದರನ್ನು ಗೆಲ್ಲಿಸಬೇಕು ಎಂಬ ಸಂಕಲ್ಪದೊಂದಿಗೆ ಪ್ರವಾಸ ಮಾಡಿದ್ದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸಲು ಸಮರ್ಥ ಅಭ್ಯರ್ಥಿ ಯಾರು ಎಂಬುದನ್ನು ಪರಿಶೀಲಿಸಿ, ಡಾ. ಮಂಜುನಾಥ್ ಅವರೇ ಗೆಲ್ಲಬಲ್ಲರು ಎಂಬ ವಿಶ್ವಾಸದಿಂದ ಸ್ಪರ್ಧಿಸುವಂತೆ ಮನವೊಲಿಸಿದೆ’ ಎಂದರು.
‘ಪಕ್ಷದ ಸಂಘಟನೆ, ಕಾರ್ಯಕರ್ತರ ಪರಿಶ್ರಮ ಮತ್ತು ಡಾ. ಮಂಜುನಾಥ್ ಅವರ ಒಳ್ಳೆಯ ಹೆಸರು ಅವರ ಗೆಲುವಿಗೆ ಕಾರಣವಾಯಿತು. ಇಷ್ಟಾದರೂ ವಿಜಯೇಂದ್ರ ಮತ್ತು ಡಿ.ಕೆ. ಶಿವಕುಮಾರ್ ಸ್ನೇಹಿತರು ಎಂದು ನಮ್ಮವರೇ ಮಾತನಾಡುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.
‘ನಾಯಕರ ಮೇಲೆ ಕಾರ್ಯಕರ್ತರಿಗೆ ವಿಶ್ವಾಸ ಬೇಕು’
‘ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕಾದರೆ ಮೊದಲು ಪಕ್ಷದ ಕಾರ್ಯಕರ್ತರಿಗೆ ತಮ್ಮ ನಾಯಕರ ಮೇಲೆ ವಿಶ್ವಾಸ ಮೂಡಬೇಕು. ನಾಯಕರು ಪರಸ್ಪರ ಆರೋಪ ಮಾಡುತ್ತಾ ಅನುಮಾನ ಹುಟ್ಟಿಸಿದರೆ ಸಂಘಟನೆ ಬಲಗೊಳ್ಳುವುದಿಲ್ಲ. ಕಾರ್ಯಕರ್ತರು ನಾಯಕರನ್ನು ನಂಬಿದಾಗ ಮಾತ್ರ ಮತದಾರರು ಬಿಜೆಪಿಯನ್ನು ನಂಬುತ್ತಾರೆ’ ಎಂದು ವಿಜಯೇಂದ್ರ ಹೇಳಿದರು.
ಪಕ್ಷದ ವರಿಷ್ಠರು ತಮಗೆ ರಾಜ್ಯ ಘಟಕದ ಅಧ್ಯಕ್ಷನ ಜವಾಬ್ದಾರಿ ನೀಡಿದ್ದು, ಕಾಂಗ್ರೆಸ್ ವಿರುದ್ಧ ಸಂಘಟನೆ ಮತ್ತು ಹೋರಾಟ ನಡೆಸುವುದಕ್ಕಾಗಿಯೇ ಹೊರತು ಹೊಂದಾಣಿಕೆ ರಾಜಕಾರಣ ಮಾಡಲು ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

bottom of page