;
top of page
< Back

ಟ್ರೇಡ್ ಲೈಸನ್ಸ್ ಇಲ್ಲ, ಕಟ್ಟಡಕ್ಕೆ ಸಿಸಿ ಇಲ್ಲ; ಆದರೂ ಮೂರು ತಿಂಗಳಿಂದ ಹೋಟೆಲ್‌ ಕಾರ್ಯಾಚರಣೆ

ಟ್ರೇಡ್ ಲೈಸನ್ಸ್ ಇಲ್ಲ, ಕಟ್ಟಡಕ್ಕೆ ಸಿಸಿ ಇಲ್ಲ; ಆದರೂ ಮೂರು ತಿಂಗಳಿಂದ ಹೋಟೆಲ್‌ ಕಾರ್ಯಾಚರಣೆ

Corporation issue

ಗ್ರಾಹಕರಿಗೆ ‘ಕನ್ನಡ ಬರಲ್ಲ, ನನ್ನದು ಮಹಾರಾಷ್ಟ್ರ’ ಎಂಬ ದರ್ಪದ ಮಾತು; ಪಾಲಿಕೆ ಅಧಿಕಾರಿಗಳ ಕ್ರಮದ ಮೇಲೆ ಅನುಮಾನ
ಬೆಳಗಾವಿ:
ಟ್ರೇಡ್ ಲೈಸನ್ಸ್ ಇಲ್ಲ. ಹೋಟೆಲ್ ಇರುವ ಕಟ್ಟಡಕ್ಕೆ ಸಿಸಿ ಕೂಡ ಇಲ್ಲ. ಆದರೂ ನಗರದಲ್ಲಿ ಒಂದು ಹೋಟೆಲ್ ಕಳೆದ ಮೂರು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ನಿರಾತಂಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಈ ಹೋಟೆಲ್‌ಗೆ ತೆರಳಿದ ಗ್ರಾಹಕರೊಂದಿಗೆ ‘ನನಗೆ ಕನ್ನಡ ಬರಲ್ಲ, ನನ್ನದು ಮಹಾರಾಷ್ಟ್ರ’ ಎಂಬ ಧಾಟಿಯಲ್ಲಿ ಮಾತನಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಇದು ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಷಯ ಪತ್ರಿಕೆಗಳಲ್ಲಿ ವರದಿಯಾಗಲು ಆರಂಭವಾದ ನಂತರ ಮಹಾನಗರ ಪಾಲಿಕೆ ಆಯುಕ್ತರು ಗಂಭೀರ ನಿಲುವು ತಾಳಿ, ಹೋಟೆಲ್‌ನ್ನು ತಕ್ಷಣ ಸೀಜ್ ಮಾಡುವಂತೆ ಅಧೀನ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಎನ್ನಲಾಗಿದೆ.
ಆದರೆ, ಆಯುಕ್ತರ ಆದೇಶ ಜಾರಿಗೆ ಬಂದಿತೇ ಎಂಬ ಪ್ರಶ್ನೆ ಈಗ ಗಂಭೀರವಾಗಿದೆ. ಕಾರಣ, ಹೋಟೆಲ್‌ನ್ನು ಸೀಜ್ ಮಾಡುವ ಬದಲು, ಹೋಟೆಲ್ ಹೊರಗಡೆ ಹಾಕಲಾಗಿದ್ದ ‘ಕ್ಲೋಸ್’ ಎಂಬ ಫಲಕದ ಫೋಟೊವನ್ನು ಮಾತ್ರ ಆಯುಕ್ತರಿಗೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆ ಫೋಟೊ ನೋಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಭಾವಿಸಿದ್ದರೆ, ವಾಸ್ತವದಲ್ಲಿ ಹೋಟೆಲ್ ಬಂದ್ ಆಗಿಲ್ಲ ಎನ್ನುವುದು ಸ್ಥಳೀಯರ ದೂರಾಗಿದೆ.
ಸ್ಥಳೀಯರ ಪ್ರಕಾರ, ಈ ಹೋಟೆಲ್ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ ವೇಳೆಯವರೆಗೆ ತೆರೆದೆಯೇ ಇರುತ್ತದೆ. ಅಷ್ಟೇ ಅಲ್ಲ, ಕಾನೂನುಬಾಹಿರವಾಗಿ ನಡೆಯುತ್ತಿರುವುದರ ಜೊತೆಗೆ ಹೋಟೆಲ್ ಎದುರಿನ ಫುಟ್‌ಪಾತ್‌ನ್ನೂ ಅತಿಕ್ರಮಿಸಿಕೊಂಡಿದೆ ಎಂಬ ಗಂಭೀರ ಆರೋಪವೂ ಇದೆ.
ಪಾಲಿಕೆ ಆಯುಕ್ತರು ಕಠಿಣ ಆದೇಶ ನೀಡಿದರೂ, ಅಧೀನ ಅಧಿಕಾರಿಗಳು ಅದನ್ನು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಜಾರಿಗೆ ತರುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಒಂದು ‘ಕ್ಲೋಸ್ ಬೋರ್ಡ್’ ಫೋಟೊ ಕಳಿಸಿ ಮೇಲಧಿಕಾರಿಗಳನ್ನು ಸಮಾಧಾನಪಡಿಸುವ ಆಡಳಿತ ಪದ್ಧತಿ ಮುಂದುವರಿದರೆ, ನಗರದಲ್ಲಿ ಕಾನೂನುಬಾಹಿರ ವ್ಯಾಪಾರಗಳಿಗೆ ಕಡಿವಾಣ ಬೀಳುವುದು ಹೇಗೆ ಎಂಬ ಪ್ರಶ್ನೆ ನಾಗರಿಕ ವಲಯದಲ್ಲಿ ಕೇಳಿಬರುತ್ತಿದೆ.
ಪಾಲಿಕೆ ಈಗ ನಿಜವಾದ ಸೀಜ್ ಕ್ರಮ ಕೈಗೊಳ್ಳುತ್ತದೆಯೇ, ಅಥವಾ ‘ಫೋಟೊ ಕ್ರಮ’ದಲ್ಲೇ ವಿಷಯ ಮುಚ್ಚಿಹೋಗುತ್ತದೆಯೇ ಎಂಬುದು ಕಾದು ನೋಡಬೇಕಿದೆ.

bottom of page