ಜಲಮಂಡಳಿ ಗುತ್ತಿಗೆ ನೌಕರರಿಗೆ ನೋಟಿಸ್ ಶಾಕ್!
ಜಲಮಂಡಳಿ ಗುತ್ತಿಗೆ ನೌಕರರಿಗೆ ನೋಟಿಸ್ ಶಾಕ್!

100ಕ್ಕೂ ಹೆಚ್ಚು ಸಿಬ್ಬಂದಿ ವಜಾ ಭೀತಿ; ಮಹಾಪೌರರಿಗೆ ಮನವಿ
ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆಯಿಂದ ಎಲ್ ಆ್ಯಂಡ್ ಟಿ ಸಂಸ್ಥೆಗೆ ಹಸ್ತಾಂತರಗೊಂಡಿದ್ದ ಜಲಮಂಡಳಿಯ ಗುತ್ತಿಗೆ ನೌಕರರ ಭವಿಷ್ಯ ಅತಂತ್ರವಾಗಿದೆ. ಯೋಜನೆ ಮುಕ್ತಾಯದ ನೆಪದಲ್ಲಿ ಸಂಸ್ಥೆಯು 100ಕ್ಕೂ ಹೆಚ್ಚು ಗುತ್ತಿಗೆ ನೌಕರರಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಮೇ 31ರವರೆಗೆ ಮಾತ್ರ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಈ ಕ್ರಮದಿಂದ 300ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ. ಸುಮಾರು 28ರಿಂದ 30 ವರ್ಷಗಳ ಕಾಲ ಜಲಮಂಡಳಿಯಲ್ಲಿ ಹಗಲು–ರಾತ್ರಿ ಸೇವೆ ಸಲ್ಲಿಸಿದ ನೌಕರರನ್ನು ಏಕಾಏಕಿ ಕೈಬಿಡುವುದು ಅನ್ಯಾಯ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೌಕರರ ಆರೋಪದಂತೆ, ಎಲ್ ಆ್ಯಂಡ್ ಟಿ ಸಂಸ್ಥೆಗೆ ಸಿಬ್ಬಂದಿಯನ್ನು ಹಸ್ತಾಂತರಿಸುವಾಗ ಎರಡು ವರ್ಷಗಳ ಸೇವೆಯ ಬಳಿಕ ಅವರನ್ನು ಮರಳಿ ಮಹಾನಗರ ಪಾಲಿಕೆಗೆ ಸೇರಿಸಿಕೊಳ್ಳಬೇಕು ಎಂಬ ಷರತ್ತು ಇತ್ತು. ಆದರೆ ಆ ಷರತ್ತನ್ನು ಪಾಲಿಸದೆ ಸಂಸ್ಥೆ ನೋಟಿಸ್ ನೀಡಿದೆ ಎನ್ನಲಾಗಿದೆ. ಜೊತೆಗೆ, ಇತ್ತೀಚೆಗೆ ನೇಮಕಗೊಂಡ ಕೆಲವರು ಹಾಗೂ ಶಿಫಾರಸ್ಸಿನ ಮೇರೆಗೆ ಬಂದವರಿಗೆ ನೋಟಿಸ್ ನೀಡದೆ ಉಳಿಸಿಕೊಂಡಿರುವುದು ತಾರತಮ್ಯಕ್ಕೆ ಕಾರಣವಾಗಿದೆ ಎಂದು ನೌಕರರು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ದಲಿತ ಮುಖಂಡ ಮಲ್ಲೇಶ್ ಚೌಗಲೆ ನೇತೃತ್ವದಲ್ಲಿ ಗುತ್ತಿಗೆ ನೌಕರರು ಮಹಾಪೌರ ಪ್ರೀತಿ ಕಾಮಕರ್ ಅವರಿಗೆ ಮನವಿ ಸಲ್ಲಿಸಿದರು. ಮಹಾಪೌರರು ಎರಡು ದಿನಗಳ ಅವಧಿ ಕೇಳಿದ್ದು, ಪಾಲಿಕೆ ಆಯುಕ್ತರು ಮತ್ತು ಎಲ್ ಆ್ಯಂಡ್ ಟಿ ಅಧಿಕಾರಿಗಳ ಜಂಟಿ ಸಭೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಚೌಗಲೆ ತಿಳಿಸಿದರು.
