;
top of page
< Back

ಜನ್ಮದಿನದಂದೇ ವಿದ್ಯಾರ್ಥಿನಿ ಆತ್ಮಹತ್ಯೆ

ಜನ್ಮದಿನದಂದೇ ವಿದ್ಯಾರ್ಥಿನಿ ಆತ್ಮಹತ್ಯೆ

Crime

ಬೆಳಗಾವಿಯ ಅಜಂನಗರ ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನಲ್ಲಿ ದಾರುಣ ಘಟನೆ
ಬೆಳಗಾವಿ | ಮೇ 11
ಬೆಳಗಾವಿ ನಗರದ ಅಜಂನಗರದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಹುಕ್ಕೇರಿ ತಾಲ್ಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ ನಾಯಕ (21) ಎಂದು ಗುರುತಿಸಲಾಗಿದೆ. ವಿಶೇಷವೆಂದರೆ, ಸೋಮವಾರವೇ ಕಾವೇರಿಯ ಜನ್ಮದಿನವಾಗಿದ್ದು, ಅದೇ ದಿನ ಅವರು ಬದುಕಿಗೆ ವಿದಾಯ ಹೇಳಿರುವುದು ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹಪಾಠಿಗಳಲ್ಲಿ ಆಘಾತ ಮೂಡಿಸಿದೆ.
ನಿಶ್ಚಿತಾರ್ಥದ ಬಳಿಕ ದುರಂತ
ಮಾಹಿತಿಯ ಪ್ರಕಾರ, ಕಳೆದ ಮೂರು ತಿಂಗಳ ಹಿಂದಷ್ಟೇ ಕಾವೇರಿಯ ನಿಶ್ಚಿತಾರ್ಥ ನಡೆದಿತ್ತು. ಪೊಲೀಸ್ ಪೇದೆಯೊಬ್ಬರೊಂದಿಗೆ ಮದುವೆ ನಿಗದಿಯಾಗಿತ್ತು ಎನ್ನಲಾಗಿದೆ. ಈ ನಡುವೆ ಕಾವೇರಿ ಏಕಾಏಕಿ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಹಾಸ್ಟೆಲ್ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಬೆಚ್ಚಿಬಿದ್ದರು. ತಕ್ಷಣ ಎಪಿಎಂಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕಾರಣ ಇನ್ನೂ ನಿಗೂಢ
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ಕಾರಣವೇ, ಮಾನಸಿಕ ಒತ್ತಡವೇ ಅಥವಾ ಬೇರೆ ಯಾವುದಾದರೂ ಹಿನ್ನೆಲೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಬಳಿಕ ಹಾಸ್ಟೆಲ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು.

bottom of page