ಜನರ ಆರಾಧ್ಯದೈವ ಗುಡ್ಡದ ಮಲ್ಲಪ್ಪನ ಗುಡಿಗೆ ದಾರಿ ಬಂದ್ ಮಾಡಿದ ವಿವಿ!
ಜನರ ಆರಾಧ್ಯದೈವ ಗುಡ್ಡದ ಮಲ್ಲಪ್ಪನ ಗುಡಿಗೆ ದಾರಿ ಬಂದ್ ಮಾಡಿದ ವಿವಿ!

ನೂತನ ಕ್ಯಾಂಪಸ್ ನಿರ್ಮಾಣದ ಭರಾಟೆಯಲ್ಲಿ ಪಾರಂಪರಿಕ ರಸ್ತೆ ಮಾಯ; ಭಕ್ತರು–ರೈತರ ಪರದಾಟ
‘ಅಭಿವೃದ್ಧಿ ಹೆಸರಿನಲ್ಲಿ ದೇವರ ದಾರಿ ಮುಚ್ಚಬೇಡಿ’—ಹೋರಾಟ ಸಮಿತಿಯ ಎಚ್ಚರಿಕೆ
ಬೆಳಗಾವಿ:
ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣವಾಗುತ್ತಿದೆ. ಬೃಹತ್ ಕಟ್ಟಡಗಳು ತಲೆ ಎತ್ತುತ್ತಿವೆ. ರಸ್ತೆ, ವಸತಿನಿಲಯ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಆದರೆ ಈ ಅಭಿವೃದ್ಧಿಯ ಭರಾಟೆಯಲ್ಲಿ ಜನರ ಆರಾಧ್ಯದೈವ ಬೆಟ್ಟದ ಮಲ್ಲಪ್ಪಸ್ವಾಮಿ ದೇವಸ್ಥಾನಕ್ಕೆ ಹೋಗುವ ಪಾರಂಪರಿಕ ದಾರಿಯೇ ಬಂದ್ ಆಗಿದೆ!
ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನ ಗುಡ್ಡದಲ್ಲಿರುವ ಪ್ರಸಿದ್ಧ ದೇವಸ್ಥಾನಕ್ಕೆ ದಶಕಗಳಿಂದ ಭಕ್ತರು, ರೈತರು ಹಾಗೂ ಗ್ರಾಮಸ್ಥರು ಬಳಸುತ್ತಿದ್ದ ಮೂಲ ರಸ್ತೆಯನ್ನು ಕ್ಯಾಂಪಸ್ ಕಾಮಗಾರಿಯ ವೇಳೆ ಮುಚ್ಚಲಾಗಿದೆ. ಇದರಿಂದ ದೇವರ ದರ್ಶನಕ್ಕೆ ತೆರಳುವ ಭಕ್ತರು ಮಾತ್ರವಲ್ಲದೆ, ತಮ್ಮ ಜಮೀನುಗಳಿಗೆ ಹೋಗುವ ರೈತರೂ ನಿತ್ಯ ಪರದಾಡುವಂತಾಗಿದೆ.
‘ಅಭಿವೃದ್ಧಿ ಬೇಕು; ಆದರೆ ಜನರ ದಾರಿ ಕಿತ್ತುಕೊಂಡು ಅಭಿವೃದ್ಧಿ ಮಾಡುವುದು ಬೇಡ. ದೇವರ ಗುಡಿಗೆ ಹೋಗುವ ದಾರಿಯನ್ನು ತಕ್ಷಣ ತೆರೆಯಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿಪರ ಹೋರಾಟ ಸಮಿತಿ ಆಗ್ರಹಿಸಿದೆ.
ಕ್ಯಾಂಪಸ್‌ಗೆ ದಾರಿ ಇದೆ; ಮಲ್ಲಪ್ಪನ ಗುಡಿಗೆ ಯಾಕಿಲ್ಲ?
ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸಲು ಹಲವು ರಸ್ತೆಗಳ ನಿರ್ಮಾಣ ನಡೆಯುತ್ತಿದೆ. ಕಟ್ಟಡಗಳಿಗೆ ತೆರಳಲು ಸುಸಜ್ಜಿತ ಮಾರ್ಗಗಳನ್ನು ರೂಪಿಸಲಾಗುತ್ತಿದೆ. ಆದರೆ ಸಾವಿರಾರು ಜನರ ಭಕ್ತಿಯ ಕೇಂದ್ರವಾಗಿರುವ ಮಲ್ಲಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವ ಹಳೆಯ ರಸ್ತೆಯನ್ನೇ ಬಂದ್ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿಗಾಗಿ ಅಲ್ಲಲ್ಲಿ ರಸ್ತೆಗಳನ್ನು ಅಗೆದು ಹಾಕಲಾಗಿದ್ದು, ರೈತರು ಕೃಷಿ ಜಮೀನುಗಳಿಗೆ ಹೋಗಲು ಪರ್ಯಾಯ ಮಾರ್ಗ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಕೆಸರು, ಗುಂಡಿ ಮತ್ತು ಅಗೆದ ಪ್ರದೇಶಗಳನ್ನು ದಾಟುವುದು ಅಪಾಯಕಾರಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿವಿಯ ಕಟ್ಟಡಗಳಿಗೆ ರಸ್ತೆ ನಿರ್ಮಿಸುವ ಆಡಳಿತ, ಜನರ ಆರಾಧ್ಯದೈವದ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನೇಕೆ ನಿರ್ಲಕ್ಷಿಸಿದೆ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ದೇವರ ದರ್ಶನಕ್ಕೂ ಅಡ್ಡಿ; ಹೊಲಕ್ಕೆ ಹೋಗಲೂ ಸಂಕಷ್ಟ
ಮಲ್ಲಪ್ಪನ ಗುಡ್ಡದ ಸುತ್ತಮುತ್ತ ಅನೇಕ ರೈತರ ಕೃಷಿ ಜಮೀನುಗಳಿವೆ. ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನೇ ರೈತರು ತಮ್ಮ ಹೊಲಗಳಿಗೆ ಹೋಗಲು ಬಳಸುತ್ತಿದ್ದರು. ಇದೀಗ ಆ ಮಾರ್ಗ ಬಂದ್ ಆಗಿರುವುದರಿಂದ ಕೃಷಿ ಸಲಕರಣೆ, ವಾಹನ ಹಾಗೂ ಜಾನುವಾರುಗಳೊಂದಿಗೆ ಹೊಲಗಳಿಗೆ ತೆರಳುವುದೂ ಕಷ್ಟವಾಗಿದೆ.
ದೇವಸ್ಥಾನಕ್ಕೆ ವಯೋವೃದ್ಧರು, ಮಹಿಳೆಯರು ಹಾಗೂ ಮಕ್ಕಳು ನಡೆದುಕೊಂಡು ಹೋಗುವುದು ದುಸ್ತರವಾಗಿದೆ. ವಿಶೇಷ ಪೂಜೆ, ಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಂತೂ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
“ವಿಶ್ವವಿದ್ಯಾಲಯದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ಬದುಕಿನ ದಾರಿ ಮತ್ತು ದೇವರ ದಾರಿಯನ್ನೇ ಮುಚ್ಚಿದರೆ ಸಹಿಸುವುದಿಲ್ಲ” ಎಂದು ಹೋರಾಟ ಸಮಿತಿಯ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಕುಲಪತಿಗೆ ಮನವಿ; ಸ್ಥಳ ಪರಿಶೀಲನೆಯ ಭರವಸೆ.
ಬೆಟ್ಟದ ಮಲ್ಲಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವ ಮೂಲ ರಸ್ತೆಯನ್ನು ಅಭಿವೃದ್ಧಿಪಡಿಸಿ ತಕ್ಷಣ ಸಂಚಾರಕ್ಕೆ ಮುಕ್ತಗೊಳಿಸಬೇಕು ಹಾಗೂ ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಿಶ್ವವಿದ್ಯಾಲಯ ಸಹಕಾರ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿಯ ನಿಯೋಗವು ಕುಲಪತಿ ಪ್ರೊ. ತ್ಯಾಗರಾಜ್ ಅವರಿಗೆ ಮನವಿ ಸಲ್ಲಿಸಿತು.
ಬಳಿಕ ಕುಲಪತಿ ಪ್ರೊ. ತ್ಯಾಗರಾಜ್ ಮತ್ತು ಕುಲಸಚಿವ ಸಂತೋಷ ಕಾಮಗೌಡ ಅವರೊಂದಿಗೆ ಜಂಟಿ ಸಮಾಲೋಚನಾ ಸಭೆ ನಡೆಸಿದ ನಿಯೋಗ, ಕ್ಯಾಂಪಸ್ ಕಾಮಗಾರಿಯಿಂದ ರೈತರು, ಭಕ್ತರು ಮತ್ತು ಸ್ಥಳೀಯ ಸಾರ್ವಜನಿಕರಿಗೆ ಎದುರಾಗಿರುವ ತೊಂದರೆಗಳನ್ನು ವಿವರಿಸಿತು.
ದೊಡ್ಡ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಕೆಲವು ತಾತ್ಕಾಲಿಕ ಸಮಸ್ಯೆಗಳು ಎದುರಾಗಬಹುದು. ದೇವಸ್ಥಾನದ ರಸ್ತೆ ಬಂದ್ ಆಗಿರುವ ವಿಷಯ ಗಮನಕ್ಕೆ ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಜೀರ್ಣಾವಸ್ಥೆಯಲ್ಲಿ ಆರಾಧ್ಯದೈವದ ಗುಡಿ
ಬೆಟ್ಟದ ಮಲ್ಲಪ್ಪಸ್ವಾಮಿ ದೇವಸ್ಥಾನವು ಹಿರೇಬಾಗೇವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಆರಾಧ್ಯ ತಾಣವಾಗಿದೆ. ಹಲವು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಪ್ರಸ್ತುತ ಜೀರ್ಣಾವಸ್ಥೆಯಲ್ಲಿದೆ.
ದೇವಸ್ಥಾನದ ಪುನರುಜ್ಜೀವನ, ಆವರಣದ ಅಭಿವೃದ್ಧಿ, ಸಂಪರ್ಕ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ವಿಶ್ವವಿದ್ಯಾಲಯ ಮುಂದಾಗಬೇಕು ಎಂದು ಸಮಿತಿ ಒತ್ತಾಯಿಸಿದೆ.
ಮಲ್ಲಪ್ಪನ ಗುಡ್ಡವನ್ನು ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಅವಕಾಶವಿದೆ. ಇದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ. ಆದರೆ ಮೊದಲಿಗೆ ದೇವಸ್ಥಾನಕ್ಕೆ ಹೋಗುವ ದಾರಿಯನ್ನು ತೆರೆಯುವುದು ಅತ್ಯಗತ್ಯ ಎಂದು ನಿಯೋಗ ಪ್ರತಿಪಾದಿಸಿದೆ.
‘ಕಿತ್ತೂರು ರಾಣಿ ಚನ್ನಮ್ಮ ವಿವಿ’ ಹೆಸರಿಗೆ ಸ್ವಾಗತ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ‘ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ನಿಯೋಗ ಸ್ವಾಗತಿಸಿತು.
ಮರುನಾಮಕರಣಕ್ಕೆ ಸಹಕರಿಸಿದ ರಾಜ್ಯ ಸರ್ಕಾರ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕುಲಪತಿ, ಕುಲಸಚಿವರು ಹಾಗೂ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಸಭೆಯಲ್ಲಿ ರೈತ ಮುಖಂಡ ಬಿ.ಎಸ್. ಗಾಣಗಿ, ವಿಶ್ವವಿದ್ಯಾಲಯ ಅಭಿವೃದ್ಧಿಪರ ಹೋರಾಟ ಸಮಿತಿ ಸಂಚಾಲಕ ಮಂಜುನಾಥ ವಸ್ತ್ರದ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಜಯ ದೇಸಾಯಿ, ರಾಜು ಪೋಲೆಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
