;
top of page
< Back

ಚಪ್ಪಾಳೆ ಕೇಳಿದ ಲಾಭ; ಹಾಲು ಕೇಳಿದ ಅಧ್ಯಕ್ಷ

ಚಪ್ಪಾಳೆ ಕೇಳಿದ ಲಾಭ; ಹಾಲು ಕೇಳಿದ ಅಧ್ಯಕ್ಷ

Jarkiholi press meet


ಬೆಳಗಾವಿ: ‘ಎರಡು ವರ್ಷಗಳಿಂದ ಒಕ್ಕೂಟ ಲಾಭದಲ್ಲಿದೆ. ಹಿಂದಿನ ವರ್ಷ ₹13 ಕೋಟಿ, ಈ ಬಾರಿ ₹12.59 ಕೋಟಿ ಲಾಭ ಗಳಿಸಿದ್ದೇವೆ. ಇಷ್ಟಾದರೂ ಯಾರೊಬ್ಬರೂ ಚಪ್ಪಾಳೆ ಹೊಡೆಯುತ್ತಿಲ್ಲ. ನಷ್ಟ ಮಾಡಿದ್ದರೆ ಮಾತ್ರ ಗದ್ದಲ ಮಾಡುತ್ತಿದ್ದಿರಾ?’—ಎಂದು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನಿಸಿದಾಗ ಸಭಾಂಗಣದಲ್ಲಿ ಕೆಲಕ್ಷಣ ಮೌನ ಆವರಿಸಿತು.
ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಾರ್ಷಿಕ ಸರ್ವಸದಸ್ಯರ ಸಭೆ, ಲಾಭದ ಲೆಕ್ಕಕ್ಕಿಂತಲೂ ಎಮ್ಮೆ ಹಾಲಿನ ‘ಲೆಕ್ಕಾಚಾರ’ದ ಸುತ್ತ ಹೆಚ್ಚು ಕಾವೇರಿತು.
‘ಊಟ ಮಾಡಿ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಸಭೆಗೆ ಬಂದಿದ್ದೀರಾ? ಒಕ್ಕೂಟ ಇತಿಹಾಸದಲ್ಲೇ ಕಾಣದಷ್ಟು ಲಾಭ ಗಳಿಸಿದೆ. ಇದಕ್ಕೆ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ರೈತರ ಸಹಕಾರ ಕಾರಣ. ಆದರೆ, ಸೌಲಭ್ಯ ಕೇಳುವಾಗ ಮಾತ್ರ ಎಲ್ಲರೂ ಕೈ ಎತ್ತುತ್ತೀರಿ’ ಎಂದು ಬಾಲಚಂದ್ರ ಜಾರಕಿಹೊಳಿ ಚಾಟಿ ಬೀಸಿದರು.
ಒಕ್ಕೂಟ ವ್ಯಾಪ್ತಿಯ 669 ಹಾಲು ಉತ್ಪಾದಕರ ಸಂಘಗಳ ಪೈಕಿ 215 ಸಂಘಗಳು ಒಂದು ಲೀಟರ್ ಎಮ್ಮೆ ಹಾಲನ್ನೂ ಬೆಮುಲ್‌ಗೆ ನೀಡಿಲ್ಲ ಎಂಬ ಅಂಕಿ–ಅಂಶವನ್ನು ಅವರು ಸಭೆಯ ಮುಂದಿಟ್ಟರು.
‘ಆಕಳ ಹಾಲನ್ನು ನಮಗೆ ಕೊಟ್ಟು, ಹೆಚ್ಚು ಬೆಲೆಬಾಳುವ ಎಮ್ಮೆ ಹಾಲನ್ನು ಖಾಸಗಿ ಡೈರಿಗಳಿಗೆ ನೀಡಿದರೆ ಒಕ್ಕೂಟ ನಡೆಸುವುದು ಹೇಗೆ? ರಬ್ಬರ್‌ ಮ್ಯಾಟ್‌, ಮೇವು ಕತ್ತರಿಸುವ ಯಂತ್ರ, ಮಿಲ್ಕಿಂಗ್ ಯಂತ್ರ, ಕಟ್ಟಡ ಅನುದಾನ, ಬಲ್ಕ್‌ ಮಿಲ್ಕ್‌ ಕೂಲರ್ ಎಲ್ಲವೂ ಬೆಮುಲ್‌ನಿಂದಲೇ ಬೇಕು; ಆದರೆ ಹಾಲು ಮಾತ್ರ ಖಾಸಗಿಯವರಿಗೆ ಎಂದರೆ ಹೇಗೆ?’ ಎಂದು ಪ್ರಶ್ನಿಸಿದರು.
ಕನಿಷ್ಠ ಶೇ 50ರಷ್ಟು ಎಮ್ಮೆ ಹಾಲನ್ನು ಬೆಮುಲ್‌ಗೆ ಪೂರೈಸುವಂತೆ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಮನವಿ ಮಾಡಿದ ಅವರು, ‘ಒಂದು ತಿಂಗಳು ಹಾಲು ಪೂರೈಕೆ ಹೆಚ್ಚಿಸಿ ತೋರಿಸಿ. ಬಳಿಕ ನಿಮ್ಮ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.
ಎಮ್ಮೆ ಹಾಲಿನ ಕೊರತೆಯಿಂದ ಮೊಸರು, ತುಪ್ಪ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ಖಾಸಗಿ ಸಂಸ್ಥೆಗಳ ಪಾಲಾಗುತ್ತಿದೆ. ‘ಒಮ್ಮೆ ಮಾರುಕಟ್ಟೆ ಕೈತಪ್ಪಿದರೆ ಮರಳಿ ಪಡೆಯುವುದು ಕಷ್ಟ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಡೈರಿ ನಡೆಸುವುದೇ ಸವಾಲಾಗಲಿದೆ’ ಎಂದರು.
₹1 ಲಕ್ಷ ವಿಮಾ ಯೋಜನೆಗೆ 70 ವರ್ಷ ಮೇಲ್ಪಟ್ಟ ಸದಸ್ಯರನ್ನು ಸೇರಿಸಲು ವಿಮಾ ಕಂಪನಿಗಳು ನಿರಾಕರಿಸಿದ್ದರಿಂದ ಯೋಜನೆ ಕೈಬಿಡಲಾಗಿದೆ. ಬದಲಿಗೆ, ಹಾಲು ಪೂರೈಸುವ ಸದಸ್ಯರ ಕುಟುಂಬಕ್ಕೆ ₹60 ಸಾವಿರ ಹಾಗೂ ಹಾಲು ಪೂರೈಸದ ಸದಸ್ಯರ ಕುಟುಂಬಕ್ಕೆ ₹25 ಸಾವಿರ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
‘ಕಬ್ಬಿನಿಂದ ವರ್ಷಕ್ಕೊಮ್ಮೆ ಹಣ ಬರುತ್ತದೆ; ಹಾಲಿನಿಂದ ಹತ್ತು ದಿನಕ್ಕೊಮ್ಮೆ ಆದಾಯ ಸಿಗುತ್ತದೆ. ರೈತರ ಬದುಕಿಗೆ ಹೈನುಗಾರಿಕೆಯೂ ಬಲವಾಗಬೇಕು. ಬೆಮುಲ್ ರೈತರದ್ದೇ ಆಸ್ತಿ; ಅದನ್ನು ಬೆಳೆಸುವ ಹೊಣೆಯೂ ರೈತರದ್ದೇ’ ಎಂದು ಹೇಳಿದರು.

bottom of page