ಕೈ ಪಾಳಯದಲ್ಲಿ ‘ಖರ್ಗೆ ಸೂತ್ರ’?
ಕೈ ಪಾಳಯದಲ್ಲಿ ‘ಖರ್ಗೆ ಸೂತ್ರ’?

ಡಿ.ಕೆ. ಶಿವಕುಮಾರ್ ದಾರಿಯಲ್ಲಿ ದಲಿತ ಸಿಎಂ ಚರ್ಚೆ; ಸಿದ್ದರಾಮಯ್ಯ ರಾಜೀನಾಮೆಗೆ ಷರತ್ತು?
ಯತೀಂದ್ರರಿಗೆ ಡಿಸಿಎಂ ಸ್ಥಾನ ಮಾತುಕತೆ ಎನ್ನುವ ಸುದ್ದಿ; ಹೈಕಮಾಂಡ್ ಮೌನದಿಂದ ಕುತೂಹಲ ಗಾಢ.
ನವದೆಹಲಿ:
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಹೊತ್ತಲ್ಲೇ, ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ ಎನ್ನುವ ಲೆಕ್ಕಾಚಾರದ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಅಚಾನಕ್ ಮುನ್ನಲೆಗೆ ಬಂದಿದೆ.
ಉನ್ನತ ಮೂಲಗಳ ಪ್ರಕಾರ, ದಲಿತ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಪ್ರಸ್ತಾಪಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುದ್ದೆ ತ್ಯಜಿಸಲು ಸಿದ್ಧತೆ ತೋರಿದ್ದಾರೆ ಎನ್ನಲಾಗುತ್ತಿದೆ. ಈ ಚರ್ಚೆಯ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರು ಇದ್ದು, ರಾಜ್ಯ ರಾಜಕೀಯದ ಮುಂದಿನ ದಿಕ್ಕು ದೆಹಲಿ ನಿರ್ಧಾರಕ್ಕೆ ಸಿಲುಕಿದೆ.
ಇನ್ನೊಂದೆಡೆ, ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವ ಕುರಿತು ಒಳಮಟ್ಟದಲ್ಲಿ ಮಾತುಕತೆ ನಡೆದಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಕಾಂಗ್ರೆಸ್‌ನಿಂದ ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ.
ದೆಹಲಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಸೇರಿದಂತೆ ಪಕ್ಷದ ಹಿರಿಯರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿರುವುದು ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ಮತ್ತಷ್ಟು ಬಲ ನೀಡಿದೆ. ಕೆಲವು ವರದಿಗಳ ಪ್ರಕಾರ, ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹೊಣೆ ಅಥವಾ ರಾಜ್ಯಸಭೆ ಅವಕಾಶ ನೀಡುವ ಸಾಧ್ಯತೆಯೂ ಚರ್ಚೆಯಲ್ಲಿದೆ.
ಇದೀಗ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗ ಶಾಸಕರನ್ನು ಭೇಟಿಯಾಗಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ, ಪಕ್ಷದ ಅಧಿಕೃತ ವಲಯಗಳು ನಾಯಕತ್ವ ಬದಲಾವಣೆ ಸುದ್ದಿಗಳನ್ನು ‘ಊಹಾಪೋಹ’ ಎಂದು ತಳ್ಳಿಹಾಕಿವೆ.
ಆದರೆ ಕಾಂಗ್ರೆಸ್ ಒಳಗೆ ಒಂದೇ ಪ್ರಶ್ನೆ ಗಟ್ಟಿಯಾಗಿ ಕೇಳಿಬರುತ್ತಿದೆ—
ಡಿ.ಕೆ.ಗೆ ಅಧಿಕಾರವೇ? ಖರ್ಗೆಗೆ ಗೌರವವೇ? ಅಥವಾ ಸಿದ್ದರಾಮಯ್ಯರ ಷರತ್ತುಗಳೇ ಅಂತಿಮವೇ?
ರಾಜ್ಯದ ಮುಂದಿನ ರಾಜಕೀಯ ತಿರುವು ಈಗ ದೆಹಲಿಯ ಒಂದು ನಿರ್ಧಾರದ ಮೇಲೆ ನಿಂತಿದೆ.
