;
top of page
< Back

ಕೆಪಿಸಿಸಿ ಪಟ್ಟಕ್ಕೆ ಅಹಿಂದ ಟ್ವಿಸ್ಟ್‌‌‌...!

ಕೆಪಿಸಿಸಿ ಪಟ್ಟಕ್ಕೆ ಅಹಿಂದ ಟ್ವಿಸ್ಟ್‌‌‌...!

Political kpcc story

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬ ಚರ್ಚೆ ತೀವ್ರಗೊಂಡಿರುವ ಹೊತ್ತಿನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ 21 ಮಠಾಧೀಶರ ಭೇಟಿ ಹೊಸ ರಾಜಕೀಯ ಸಂದೇಶ ರವಾನಿಸಿದೆ.
ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ವಿವಿಧ ಮಠಗಳ ಸ್ವಾಮೀಜಿಗಳು ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು, ಕೆಪಿಸಿಸಿ ಪಟ್ಟದ ರಾಜಕೀಯಕ್ಕೆ ‘ಅಹಿಂದ’ ಟ್ವಿಸ್ಟ್ ನೀಡಿದೆ. ಮೇಲ್ನೋಟಕ್ಕೆ ಇದು ಸೌಜನ್ಯದ ಭೇಟಿ ಎನ್ನಿಸಿದರೂ, ಅದರ ಒಳಹರಿವು ಸ್ಪಷ್ಟವಾಗಿ ಸಾಮಾಜಿಕ ಪ್ರಾತಿನಿಧ್ಯದ ಬೇಡಿಕೆಯನ್ನು ಹೊತ್ತಿದೆ.
ಮೂಲಗಳ ಪ್ರಕಾರ, ಈ ಬಾರಿಯ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದ ಪ್ರಭಾವಿ ನಾಯಕರಿಗೆ ನೀಡಬೇಕು ಎಂಬ ಅಭಿಪ್ರಾಯ ಮಠಾಧೀಶರಿಂದ ವ್ಯಕ್ತವಾಗಿದೆ. ಆ ಲೆಕ್ಕಾಚಾರದಲ್ಲಿ ಉತ್ತರ ಕರ್ನಾಟಕದಲ್ಲಿ ಸಂಘಟನಾ ಹಿಡಿತ, ದಲಿತ–ಹಿಂದುಳಿದ ವರ್ಗಗಳ ನಡುವೆ ಸ್ವೀಕಾರಾರ್ಹತೆ ಹಾಗೂ ಕಾಂಗ್ರೆಸ್‌ನೊಳಗಿನ ಅನುಭವ ಹೊಂದಿರುವ ಸತೀಶ್ ಜಾರಕಿಹೊಳಿ ಹೆಸರು ಮತ್ತಷ್ಟು ಬಲವಾಗಿ ಮುನ್ನೆಲೆಗೆ ಬಂದಿದೆ.
ಜಾರಕಿಹೊಳಿ ಭೇಟಿಯ ನಂತರ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೆರಳಿರುವುದು ಈ ಬೆಳವಣಿಗೆಗೆ ಇನ್ನಷ್ಟು ರಾಜಕೀಯ ಅರ್ಥ ನೀಡಿದೆ. ಇದು ಕೇವಲ ವ್ಯಕ್ತಿ ಬೆಂಬಲದ ಅಭಿಯಾನವಲ್ಲ; ಕಾಂಗ್ರೆಸ್‌ನಲ್ಲಿ ಅಹಿಂದ ಸಮುದಾಯಗಳ ಪಾಲುದಾರಿಕೆ ಅಧಿಕಾರದ ಕೇಂದ್ರದಲ್ಲಿಯೂ ಪ್ರತಿಫಲಿಸಬೇಕು ಎಂಬ ಸಂದೇಶ.
ಕೆಪಿಸಿಸಿ ಪಟ್ಟದ ನಿರ್ಧಾರ ಈಗ ಕೇವಲ ಸಂಘಟನಾ ಆಯ್ಕೆ ಅಲ್ಲ. ಅದು ಜಾತಿ ಸಮತೋಲನ, ಉತ್ತರ ಕರ್ನಾಟಕದ ಪ್ರಾತಿನಿಧ್ಯ ಮತ್ತು ಮುಂದಿನ ಚುನಾವಣಾ ತಂತ್ರದ ಮಹತ್ವದ ಪರೀಕ್ಷೆಯಾಗಿದೆ.

bottom of page