ಕರ್ತವ್ಯನಿಷ್ಠ ಸಿಪಿಐ ದುರಂತ ಅಂತ್ಯ
ಕರ್ತವ್ಯನಿಷ್ಠ ಸಿಪಿಐ ದುರಂತ ಅಂತ್ಯ

ಚನ್ನಮ್ಮ ನಗರದಲ್ಲಿ ಎಸ್‌ಡಿಆರ್‌ಎಫ್ ಅಧಿಕಾರಿಯ ಆತ್ಮಹತ್ಯೆ |
ಕಾರಣ ಇನ್ನೂ ನಿಗೂಢ | ಉದ್ಯಮಬಾಗ ಪೊಲೀಸರಿಂದ ತನಿಖೆ.
ಬೆಳಗಾವಿ: ವಿಪತ್ತು ಸಂದರ್ಭದಲ್ಲಿ ಜನರ ಜೀವ ರಕ್ಷಣೆಗೆ ಧಾವಿಸುತ್ತಿದ್ದ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್)ಯ ಸಿಪಿಐ ಶ್ರೀಶೈಲ ಚೌಗಲೆ (37) ಅವರ ಬದುಕು ದುರಂತವಾಗಿ ಅಂತ್ಯ ಕಂಡಿದೆ. ನಗರದ ಚನ್ನಮ್ಮ ನಗರದಲ್ಲಿರುವ ಮನೆಯಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಮನೆಯ ಕೊಠಡಿಯ ಬಾಗಿಲು ಒಳಗಿನಿಂದ ಹಾಕಿಕೊಂಡಿದ್ದರಿಂದ ಪತ್ನಿಗೆ ಅನುಮಾನ ಬಂದಿದೆ. ತಕ್ಷಣವೇ ಅವರು ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬಾಗಿಲು ಮುರಿದು ಚೌಗಲೆ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಗೆ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಪರಿಚಿತರ ವಲಯದಲ್ಲಿ ಆಘಾತ ವ್ಯಕ್ತವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕರ್ತವ್ಯದಲ್ಲಿ ಧೈರ್ಯದಿಂದ ನಿಂತಿದ್ದ ಅಧಿಕಾರಿಯೊಬ್ಬರು ಇಂತಹ ನಿರ್ಧಾರಕ್ಕೆ ಏಕೆ ಮುಂದಾದರು ಎಂಬ ಪ್ರಶ್ನೆ ಈಗ ತನಿಖೆಯ ಕೇಂದ್ರಬಿಂದುವಾಗಿದೆ.
