ಕನ್ನಡಕ್ಕೆ ದರ್ಪ ತೋರಿದ ಹೋಟೆಲ್‌ಗೆ ಪಾಲಿಕೆಯಿಂದ ಬೀಗ!
ಕನ್ನಡಕ್ಕೆ ದರ್ಪ ತೋರಿದ ಹೋಟೆಲ್‌ಗೆ ಪಾಲಿಕೆಯಿಂದ ಬೀಗ!

ಕನ್ನಡ ಬರಲ್ಲ… ಮರಾಠಿ ಅಥವಾ ಹಿಂದಿಯಲ್ಲಿ ಮಾತಾಡಿ” ಎಂದಿದ್ದ ಹೋಟೆಲ್ ವಿರುದ್ಧ ಮಹಾನಗರ ಪಾಲಿಕೆ ಕ್ರಮ
ಬೆಳಗಾವಿ:
ಕನ್ನಡ ನೆಲದಲ್ಲೇ “ಕನ್ನಡ ಬರಲ್ಲ… ನಮ್ಮದು ಮಹಾರಾಷ್ಟ್ರ. ಮರಾಠಿ ಅಥವಾ ಹಿಂದಿಯಲ್ಲಿ ಮಾತಾಡಿ” ಎಂದು ದರ್ಪ ತೋರಿದ್ದ ಹೋಟೆಲ್‌ಗೆ ಬೆಳಗಾವಿ ಮಹಾನಗರ ಪಾಲಿಕೆ ತಕ್ಕ ಪಾಠ ಕಲಿಸಿದೆ.
ಇ-ಬೆಳಗಾವಿ ವರದಿ ಬಳಿಕ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಹೋಟೆಲ್ ದಾಖಲೆಗಳ ಪರಿಶೀಲನೆ ನಡೆಸಿದ್ದು, ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
🔍 ಪರಿಶೀಲನೆಯಲ್ಲಿ ಏನು ಬಯಲಾಯಿತು?
✅ ಹೋಟೆಲ್ ನಡೆಸಲು ಪಾಲಿಕೆಯಿಂದ ಟ್ರೇಡ್ ಲೈಸನ್ಸ್ ಪಡೆದಿರಲಿಲ್ಲ
✅ ಹೋಟೆಲ್ ನಡೆಯುತ್ತಿದ್ದ ಕಟ್ಟಡಕ್ಕೆ ಅಗತ್ಯ ಸಿ.ಸಿ. ಪ್ರಮಾಣಪತ್ರವೂ ಇರಲಿಲ್ಲ
✅ ನಿಯಮಗಳನ್ನು ಮೀರಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿತ್ತು
ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ನಿರ್ದೇಶನದಂತೆ ಅಧಿಕಾರಿಗಳು ಹೋಟೆಲ್ ಬಂದ್ ಮಾಡಿಸಿದ್ದಾರೆ.
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ
ಬೆಳಗಾವಿ ಕರ್ನಾಟಕದ ಗಡಿನಗರ. ಇಲ್ಲಿ ಭಾಷಾ ವೈವಿಧ್ಯ ಇದ್ದರೂ, ಕನ್ನಡಕ್ಕೆ ಅವಮಾನ ಮಾಡುವ ಧೋರಣೆ ಸಹಿಸುವಂತದ್ದು ಅಲ್ಲ. ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿ, “ಮರಾಠಿ ಅಥವಾ ಹಿಂದಿಯಲ್ಲಿ ಮಾತನಾಡಿ” ಎಂದು ಹೇಳಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ನೋವುಂಟುಮಾಡಿತ್ತು.
ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ ಪಾಲಿಕೆಯ ಕ್ರಮದಿಂದ ಕನ್ನಡಿಗರ ಆಕ್ರೋಶಕ್ಕೆ ಉತ್ತರ ಸಿಕ್ಕಂತಾಗಿದೆ.
⚡ ಇ-ಬೆಳಗಾವಿ ವರದಿ ಫಲಶೃತಿ
ಇ-ಬೆಳಗಾವಿ ಈ ವಿಷಯವನ್ನು ಬೆಳಕಿಗೆ ತಂದ ಬಳಿಕ ಪಾಲಿಕೆ ಯಂತ್ರಾಂಗ ಚುರುಕುಗೊಂಡಿದೆ. ಕೇವಲ ಭಾಷಾ ದರ್ಪವಷ್ಟೇ ಅಲ್ಲ, ಹೋಟೆಲ್ ನಿಯಮಬಾಹಿರವಾಗಿ ನಡೆಯುತ್ತಿರುವುದೂ ಪತ್ತೆಯಾಗಿದೆ.
