ಉಪನೋಂದಣಿ ಕಚೇರಿಗಳಲ್ಲಿ
ಭೂಗಳ್ಳರ ಆಟ..!
ಉಪನೋಂದಣಿ ಕಚೇರಿಗಳಲ್ಲಿ
ಭೂಗಳ್ಳರ ಆಟ..!

ಸತ್ತವನೇ ಜಮೀನು ಮಾರಿದ ಕಥೆ.
ಉಪನೋಂದಣಿ ಕಚೇರಿಗಳ
ಮುದ್ರೆಯ ಹಿಂದೆ ಭೂಗಳ್ಳರ ಆಟ..!
--
1987ರಲ್ಲಿ ಮೃತಪಟ್ಟ ವ್ಯಕ್ತಿ 2024 ಮತ್ತು 2026ರಲ್ಲಿ 'ಬದುಕಿ' ಸೇಲ್ಡೀಡ್ಗಳಿಗೆ ಸಹಿ | ಆಧಾರ್, ಸಹಿ, ವಿಳಾಸ, ಪಾವತಿ ವಿವರಗಳಲ್ಲಿ ಗಂಭೀರ ವ್ಯತ್ಯಾಸ | ಸಬ್ರಿಜಿಸ್ಟ್ರಾರ್ಗಳ ಪಾತ್ರವೇ ತನಿಖೆಯ ಕೇಂದ್ರವಾಗಲಿ
--
ಬೆಳಗಾವಿ:
ಗಡಿನಾಡಿನ ಭೂ ದಾಖಲೆ ವ್ಯವಸ್ಥೆಯ ಮೇಲೆ ಜನ ಇಡುವ ನಂಬಿಕೆಗೆ ದೊಡ್ಡ ಹೊಡೆತ ನೀಡುವ ಪ್ರಕರಣವೊಂದು ಬೆಳಗಾವಿಯಲ್ಲಿ ಬಯಲಾಗಿದೆ.
ಪಾಲಿಕೆಯ ಅಧಿಕೃತ ದಾಖಲೆ ಪ್ರಕಾರ 1987 ಏಪ್ರಿಲ್ 9 ರಂದು ಮೃತಪಟ್ಟ ದಿಗಂಬರ ಶ್ರೀಪಾದ ಕುಲಕರ್ಣಿ ಎಂಬುವವರು, ದಾಖಲೆಗಳ ಪ್ರಕಾರ, 2024 ಮತ್ತು2026 ರಂ<ದು ಎರಡು ಬಾರಿ ಮತ್ತೇ ಜೀವಂತವಾಗಿ ಬಂದು ತಮ್ಮ ಬಹುಕೋಟಿ ರೂ ಬೆಲೆಬಾಳುವ ಜಮೀನು ಮಾರಾಟ ಮಾಡಿದ್ದಾರೆ.
2024 ಸೆಪ್ಟೆಂಬರ್ 3ರಂದು ಖಾನಾಪುರ ಉಪನೋಂದಣಿ ಕಚೇರಿಗೆ ಬಂದು ಅಂಕಲಗಿಯ 8 ಎಕರೆ 37 ಗುಂಟೆ ಜಮೀನು ಮತ್ತು 2026 ಏಪ್ರಿಲ್ 24 ರಂದು ಬೆಳಗಾವಿ ದಕ್ಷಿಣ ಉಪನೋಂದಣಿ ಕಚೇರಿಗೆ ಬಂದು ಅಂಕಲಗಿಯಲ್ಲಿನ 9 ಎಕರೆ 33 ಗುಂಟೆ ಜಮೀನಿನ ಖರೀದಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಎರಡೂ ಸೇಲ್ಡೀಡ ಸೇರಿದಂತೆ ಇನ್ನಿತರ ದಾಖಲೆಗಳು ಈಗ ಪತ್ರಿಕೆಗೆ ಲಭ್ಯವಾಗಿವೆ.
ಈ ಹಿಂದೆ ಕೂಡ ವಿವಿಧ ಮಾಧ್ಯಮಗಳಲ್ಲಿ ಭೂ ಮಾಫಿಯಾ ವಿರುದ್ಧ ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದು ಕೇವಲ ನಕಲಿ ದಾಖಲೆಗಳ ಪ್ರಕರಣವಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಗಳ ಪರಿಶೀಲನಾ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ, ಅಥವಾ ಭೂ ಮಾಫಿಯಾದ ಮುಂದೆ ಎಷ್ಟು ಸುಲಭವಾಗಿ ಮಣಿಯುತ್ತಿದೆ ಎಂಬುದಕ್ಕೆ ಇದು ಬೆಚ್ಚಿಬೀಳಿಸುವ ಉದಾಹರಣೆ ಎಂದು ಹೇಳಬಹುದು.
ಸತ್ತ ವ್ಯಕ್ತಿ ಕಚೇರಿಗೆ ಹೇಗೆ ಬಂದ? ಬಂದಿದ್ದರೆ ಯಾರು ಗುರುತಿಸಿದರು? ಆಧಾರ್ ದೃಢೀಕರಣ, ಫೋಟೋ, ಬೆರಳಚ್ಚು, ಸಹಿ ಇವೆಲ್ಲವನ್ನು ಯಾರು ಪರಿಶೀಲಿಸಿದರು? ಪರಿಶೀಲನೆ ನಡೆದಿದ್ದರೆ ನಕಲಿ ವ್ಯವಹಾರ ಹೇಗೆ ಪಾಸಾಯಿತು? ಪರಿಶೀಲನೆ ನಡೆದಿರದಿದ್ದರೆ ಮುದ್ರೆ ಹಾಕಿದ ಅಧಿಕಾರಿಗಳ ಹೊಣೆಗಾರಿಕೆ ಎಲ್ಲಿ ಎನ್ನುವ ಬಹುದೊಡ್ಡ ಪ್ರಶ್ನೆ ಇಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
---
ಎಲ್ಲವೂ ಬೇರೆ ಬೇರೆ...!
ಎರಡು ಸೇಲ್ಡೀಡ್ಗಳಲ್ಲಿ ಆಧಾರ್ ಸಂಖ್ಯೆ ಬೇರೆ, ಸಹಿ ಶೈಲಿ ಬೇರೆ, ವಿಳಾಸದಲ್ಲಿ ಗೊಂದಲ, ಪಾವತಿ ವಿವರದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ.
ಒಂದು ಕಡೆ ಆಸ್ತಿಯ ಮೌಲ್ಯ 45 ಲಕ್ಷ ಎಂದು ತೋರಿಸಿ, ಪಾವತಿ ವಿವರದಲ್ಲಿ ತಲಾ 2.5 ಲಕ್ಷದ ಎರಡು ಚೆಕ್ಗಳಷ್ಟೇ ದಾಖಲಾಗಿವೆ.
ಅಂದರೆ 5 ಲಕ್ಷದ ಪಾವತಿ ವಿವರದ ನಡುವೆ 45 ಲಕ್ಷದ ವ್ಯವಹಾರಕ್ಕೆ ಮುದ್ರೆ ಬಿದ್ದಿದೆ. ಇದು ಗಣಿತದ ತಪ್ಪೇ, ಅಥವಾ ವ್ಯವಸ್ಥಿತ ಗ್ಯಾಂಗ್ನ ಗುರುತೇ ಎಂಬ ಪ್ರಶ್ನೆ ಈಗ ಗಂಭೀರವಾಗಿದೆ.
ಇನ್ನೂ ವಿಚಿತ್ರವೆಂದರೆ, ಮೊದಲ ಅನುಮಾನಿತ ನೋಂದಣಿ ಬಗ್ಗೆ ದೂರುಗಳು ಜಿಲ್ಲಾಡಳಿತದ ಗಮನಕ್ಕೆ ಬಂದ ನಂತರವೂ ಅದೇ ಹೆಸರಿನಲ್ಲಿ ಮತ್ತೊಂದು ನೋಂದಣಿ ನಡೆದಿದೆ. ಹಾಗಾದರೆ ಉಪನೋಂದಣಿ ಕಚೇರಿಗಳ ನಡುವೆ ಎಚ್ಚರಿಕೆ ವ್ಯವಸ್ಥೆಯೇ ಇಲ್ಲವೇ? ಜಿಲ್ಲಾಧಿಕಾರಿಗಳ ಸೂಚನೆಗಳು ಕಾಗದದಲ್ಲೇ ಉಳಿದವೆಯೇ? ಜನರ ಜಮೀನು ಕಾಯಬೇಕಾದ ಕಚೇರಿಗಳೇ ಭೂಗಳ್ಳರಿಗೆ 'ಸುರಕ್ಷಿತ ಬಾಗಿಲು' ಆಗುತ್ತಿವೆಯೇ ಎನ್ನುವ ಪ್ರಶ್ನೆ ಸಹಜವಾಗಿ ಕೇಳಿ ಬರುತ್ತಿವೆ.
ಈ ಪ್ರಕರಣದಲ್ಲಿ ತನಿಖೆ ಖರೀದಿದಾರ, ದಾಖಲೆ ಬರಹಗಾರ, ಸಾಕ್ಷಿದಾರರ ಮಟ್ಟದಲ್ಲಿ ನಿಲ್ಲಬಾರದು. ಎರಡೂ ನೋಂದಣಿಗಳ ಸಮಯದ ಬಯೋಮೆಟ್ರಿಕ್ ಲಾಗ್, ಆಧಾರ್ ದೃಢೀಕರಣ ದಾಖಲೆ, ಸಿಸಿಟಿವಿ ದೃಶ್ಯ, ಫೋಟೋ, ಸಹಿ, ಪಾವತಿ ವಿವರ, ಬ್ಯಾಂಕ್ ಚೆಕ್ ಸ್ಥಿತಿ ಹಾಗೂ ದಿನದ ನೋಂದಣಿ ರಿಜಿಸ್ಟರ್ಗಳನ್ನು ತಕ್ಷಣ ವಶಪಡಿಸಿಕೊಳ್ಳಬೇಕು. ಸಂಬಂಧಿಸಿದ ಉಪನೋಂದಣಾಧಿಕಾರಿಗಳನ್ನು ವಿಚಾರಣೆ ಪೂರ್ಣಗೊಳ್ಳುವವರೆಗೆ ಕರ್ತವ್ಯದಿಂದ ದೂರವಿಟ್ಟು, ಸ್ವತಂತ್ರ ತನಿಖೆ ನಡೆಸುವುದು ಅಗತ್ಯ ಎನ್ನುವ ಮಾತು ಕೇಳಿ ಬರುತ್ತಿದೆ.
ಇಂದು ದಿಗಂಬರ ಕುಲಕರ್ಣಿ ಯವರ ಹೆಸರಿನಲ್ಲಿ ಮತ್ತು ನಾಳೆ ವೃದ್ಧರ, ವಿದೇಶದಲ್ಲಿರುವವರ, ವಾರಸುದಾರರ ಅಥವಾ ಟ್ರಸ್ಟ್ ಆಸ್ತಿಗಳ ಮೇಲೂ ಇದೇ ಆಟ ನಡೆಯದಿರುತ್ತದೆ ಎಂಬ ಭರವಸೆ ಯಾರು ಕೊಡುತ್ತಾರೆ?
ಸತ್ತವರು ಕಚೇರಿಗೆ ಬರುವುದಿಲ್ಲ. ಆದರೆ ಸತ್ತವರ ಹೆಸರಿನಲ್ಲಿ ಜಮೀನು ಮಾರಾಟವಾಗುತ್ತಿದೆ ಎಂದರೆ, ಅದನ್ನು ಸಾಧ್ಯವಾಗಿಸುವ ವ್ಯವಸ್ಥೆ ಇನ್ನೂ ಜೀವಂತವಾಗಿದೆ.
ಸರ್ಕಾರ ಈಗಲೇ ಕಣ್ಣು ತೆರೆಯದಿದ್ದರೆ, ಭೂ ಮಾಫಿಯಾದ ಅಪರಾಧಕ್ಕಿಂತ ಸರ್ಕಾರಿ ಮುದ್ರೆಯ ಮೌನವೇ ದೊಡ್ಡ ಅಪರಾಧವಾಗಿ ನಿಲ್ಲಲಿದೆ.
